ನ್ಯೂಸ್

ಮಾಲಿವಾಲ್​ ಮೇಲೆ ಹಲ್ಲೆ; ಕೇಜ್ರಿವಾಲ್ ಆಪ್ತ ಬಿಭವ್​ 3 ದಿನ ಪೊಲೀಸ್​ ಕಸ್ಟಡಿಗೆ

ನವದೆಹಲಿ: ಎಎಪಿ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಆಪಾದಿತ ಹಲ್ಲೆ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರನ್ನು ದೆಹಲಿಯ ತೀಸ್ ಹಜಾರಿ ಕೋರ್ಟ್ ಮಂಗಳವಾರ ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಆದೇಶಿಸಿದೆ.

ಬಿಭವ್ ಸಿಎಂ ಅರವಿಂದ್​ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಎಂದು ಹೇಳಲಾಗುತ್ತಿದೆ. ಮೇ 13 ರಂದು ಕೇಜ್ರಿವಾಲ್ ಅವರನ್ನು ಭೇಟಿಯಾಗಲು ಸ್ವಾತಿ ಮಲಿವಾಲ್ ಬಂದಿದ್ದಾಗ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದೆ.

ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಗೌರವ್ ಗೋಯಲ್ ಅವರು ಕುಮಾರ್ ಅವರನ್ನು ಮೇ 31 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಿದ್ದಾರೆ. ದೆಹಲಿ ಪೊಲೀಸರು ಕುಮಾರ್ ಅವರನ್ನು ಐದು ದಿನಗಳ ಕಸ್ಟಡಿಗೆ ಕೋರಿದ್ದರು. ಆದಾಗ್ಯೂ, ಕುಮಾರ್ ಅವರ ಕಸ್ಟಡಿ ವಿಚಾರಣೆಯನ್ನು ವಕೀಲರು ವಿರೋಧಿಸಿದ್ದರು. ಇದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದರು.

ಸೋಮವಾರ, ಕುಮಾರ್ ಅವರ ಜಾಮೀನು ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯವು ವಜಾಗೊಳಿಸಿತ್ತು. ಜಾಮೀನು ಅರ್ಜಿ ತಿರಸ್ಕೃತಗೊಂಡ ನಂತರ, ನಗರ ನ್ಯಾಯಾಲಯದ ತೀರ್ಪಿನ ವಿರುದ್ಧ ಬಿಭವ್ ಕುಮಾರ್ ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ತಿಳಿಸಿದೆ.

ಪ್ರಕರಣದಲ್ಲಿ ಬಿಭವ್ ಕುಮಾರ್ ಅವರ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ತಿರಸ್ಕರಿಸಿದ ಒಂದು ದಿನದ ನಂತರ ನ್ಯಾಯಾಲಯದಿಂದ ಈ ಆದೇಶ ಬಂದಿದೆ. ಎಫ್‌ಐಆರ್ ದಾಖಲಿಸುವಲ್ಲಿ ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರು ಯಾವುದೇ “ಪೂರ್ವ ತಯಾರಿ” ಮಾಡಿಲ್ಲ ಮತ್ತು ಅವರ ಆರೋಪಗಳನ್ನು “ತಳ್ಳಿ ಹಾಕಲು” ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

“ಸಂತ್ರಸ್ತೆ ಮಾಡಿರುವ ಆರೋಪಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅವುಗಳನ್ನು ತಳ್ಳಿ ಹಾಕಲು ಸಾಧ್ಯವಿಲ್ಲ. ಎಫ್‌ಐಆರ್ ದಾಖಲಿಸುವಲ್ಲಿ ಕೇವಲ ವಿಳಂಬವು ಪ್ರಕರಣದ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಏಕೆಂದರೆ ನಾಲ್ಕು ದಿನಗಳ ನಂತರ ಗಾಯಗಳು ಸ್ಪಷ್ಟವಾಗಿ ಗೋಚರಿಸುತ್ತವೆ ಎಂದು ಅಡಿಷನಲ್ ಸೆಷನ್ಸ್ ನ್ಯಾಯಾಧೀಶ ಸುಶೀಲ್ ಅನುಜ್ ತ್ಯಾಗಿ ಹೇಳಿದ್ದಾರೆ.

ವಿಚಾರಣೆಯ ಸಂದರ್ಭದಲ್ಲಿ, ಬಿಭವ್ ಕುಮಾರ್ ಪರ ವಕೀಲ ಎನ್ ಹರಿಹರನ್, ಮೇ 13 ರಂದು ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ನಡೆದ ಘಟನೆಯ ನಂತರ ಮೇ 16 ರಂದು ತನ್ನ ಕಕ್ಷಿದಾರನ ವಿರುದ್ಧ ‘ಸಂಚು ಮಾಡಿ ಹೆಣೆದ’ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ವಾದಿಸಿದರು.