ಸ್ವಾತಿಷ್ಟ ಕೃಷ್ಣನ್ 
ನ್ಯೂಸ್

‘ಅತಿಕಾಯ’ ಅಡ್ಡದಲ್ಲಿ ಸ್ವಾತಿಷ್ಠ ಕೃಷ್ಣನ್ : ನಿರೂಪ್ ಭಂಡಾರಿಗೆ ಜೋಡಿಯಾದ ‘ಒಂದು ಸರಳ ಪ್ರೇಮಕಥೆ’ ನಟಿ

ಪ್ರಮುಖ ಮುಖ್ಯಾಂಶಗಳು

  • ಒಂದು ಸರಳ ಪ್ರೇಮಕಥೆ, ರಕ್ಕಸಪುರದೋಳ್​ ಬಳಿಕ ಮತ್ತೊಂದು ಕನ್ನಡ ಸಿನಿಮಾದಲ್ಲಿ ಸ್ವಾತಿಷ್ಟ
  • ಅತಿಕಾಯ ಚಿತ್ರದಲ್ಲಿ ನಿರೂಪ್ ಭಂಡಾರಿಗೆ ಜೋಡಿಯಾದ ನಟಿ
  • ಪಾತ್ರ ಚಿತ್ರದ ಕಥೆಯಲ್ಲಿ ಪ್ರಮುಖ ಭಾಗವಾಗಿರಲಿದೆ ಎಂದ ತಂಡ
ಬೆಂಗಳೂರು: ಮೂಲತಃ ಧಾರಾವಾಡದ ಪ್ರತಿಭಾನ್ವಿತ ನಟಿ ಸ್ವಾತಿಷ್ಠ ಕೃಷ್ಣನ್ ಕನ್ನಡಕ್ಕಿಂತ ಮೊದಲು ತಮಿಳು ಚಿತ್ರರಂಗದಲ್ಲಿ ಬೆಳಕು ಕಂಡವರು. ‘ಹಾಫ್ ಬಾಯ್ಲ’ (2017) ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ಅವರು ಬಳಿಕ ‘ಕೀ’, ‘ಜಡ’ ಹಾಗೂ ಕಮಲ್ ಹಾಸನ್ ನಟನೆಯ ‘ವಿಕ್ರಮ್’ ಚಿತ್ರಗಳಲ್ಲಿ ನಟಿಸಿದ್ದರು. ಕಾಲಿವುಡ್‌ನಲ್ಲಿ ಸಾಧನೆಯ ಹೆಜ್ಜೆ ಮೂಡಿಸಿದ ಬಳಿಕ ಸ್ವಾತಿಷ್ಠ ಸ್ಯಾಂಡಲ್‌ವುಡ್‌ನತ್ತ ಗಮನ ಹರಿಸಿ, ಸಿಂಪಲ್ ಸುನಿ ನಿರ್ದೇಶನದ ‘ಒಂದು ಸರಳ ಪ್ರೇಮಕಥೆ’ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಇದೇ ಫೆಬ್ರವರಿಯಲ್ಲಿ ತೆರೆಗೆ ಬಂದ ‘ರಕ್ಕಸಪುರದೋಳ್’ನಲ್ಲಿ ನಟಿಯ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ನಿರೂಪ್ ಭಂಡಾರಿ ಅಭಿನಯದ ‘ಅತಿಕಾಯ’ ಚಿತ್ರತಂಡ ಸೇರಿಕೊಂಡಿದ್ದಾರೆ. ಕೆಲ ವರ್ಷಗಳ ಹಿಂದೆಯೇ ಸೆಟ್ಟೇರಿದ್ದ ‘ಅತಿಕಾಯ’ ಚಿತ್ರದಲ್ಲಿ ನಿರೂಪ್ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪಾತ್ರಕ್ಕಾಗಿ ದೇಹವನ್ನು ಹುರಿಗೊಳಿಸಿದ್ದು, ಆ್ಯಕ್ಷನ್ ಅವತಾರದಲ್ಲಿ ಮಿಂಚಲಿದ್ದಾರೆ. ಇದೀಗ ಈ ತಂಡವನ್ನು ಸ್ವಾತಿಷ್ಠ ಸೇರ್ಪಡೆಯಾಗಿದ್ದಾರೆ. ‘ಪದೇ ಪದೇ’, ‘ನಮಕ್ ಹರಾಮ್’ ಚಿತ್ರಗಳ ನಿರ್ದೇಶಕ ನಾಗರಾಜ್ ಪೀಣ್ಯ ಸಣ್ಣ ಗ್ಯಾಪ್ ಬಳಿಕ ‘ಅತಿಕಾಯ’ನಿಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಬೆಂಗಳೂರಿನ ಸುತ್ತಮುತ್ತ ಶೂಟಿಂಗ್ ನಡೆಸಲಾಗಿದ್ದು, ಸದ್ಯ ಕೊನೆಯ ಹಂತದ ಚಿತ್ರೀಕರಣಕ್ಕೆ ಸಿದ್ಧತೆ ನಡೆದಿದೆ. ಇಲ್ಲಿ ಸ್ವಾತಿಷ್ಠ ಪಾತ್ರ ವಿಭಿನ್ನವಾಗಿರಲಿದ್ದು, ಅವರು ಬರೀ ನಾಯಕಿಯಾಗಿರದೇ ಕಥೆಯ ಪ್ರಮುಖ ಭಾಗವಾಗಿರಲಿದ್ದಾರೆ ಎನ್ನಲಾಗಿದೆ.