ನ್ಯೂಸ್

‘ಸ್ವಚ್ಛ ಆಸ್ಪತ್ರೆ - ನಮ್ಮ ಆದ್ಯತೆ’ ಅಭಿಯಾನ

ಪಂಕಜ ಕೆ.ಎಂ.

ಬೆಂಗಳೂರು: ‘‘ಸ್ವಚ್ಛ ಆಸ್ಪತ್ರೆ - ನಮ್ಮ ಆದ್ಯತೆ’ ಅಭಿಯಾನದಡಿ ಆರೋಗ್ಯ ಕೇಂದ್ರಗಳಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಸಮಾಜದ ಎಲ್ಲಾ ನಾಗರೀಕರಿಗೆ ಆರೋಗ್ಯ ಸೇವೆಗಳನ್ನು ಅಂತ್ಯೋದಯ ಮಾದರಿಯಲ್ಲಿ ನೀಡಲು ಕೇಂದ್ರ ಸರ್ಕಾರ ‘ಆಯುಷ್ಮಾನ್ ಭವ’ ಅಭಿಯಾನ ವಿನ್ಯಾಸಗೊಳಿಸಿದೆ. ಜನರ ಆರೋಗ್ಯ ದೃಷ್ಟಿಯಿಂದ ರಾಜ್ಯದಲ್ಲಿ ಸ್ವಚ್ಛ ಆಸ್ಪತ್ರೆ -ನಮ್ಮಆದ್ಯತೆ ಅಭಿಯಾನದಡಿ ಎಲ್ಲಾ ಹಂತಗಳ ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಸ್ವಚ್ಛತಾ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಈ ಕಾರ್ಯದಲ್ಲಿ ಸಂಘಸಂಸ್ಥೆಗಳ ಪ್ರತಿನಿಧಿಗಳು ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಅಭಿಯಾನದಡಿ ಆರೋಗ್ಯ ಸಂಸ್ಥೆಯಲ್ಲಿ ಇರುವ ಅನುಪಯುಕ್ತ ಸಾಮಾಗ್ರಿಗಳು, ಪರಿಕರಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತದೆ. ಆವರಣದ ಗೋಡೆಗಳ ಸ್ವಚ್ಛತೆ, ಅನುಪಯುಕ್ತ ಗಿಡಗಂಟಿಗಳ ತೆರವು, ಕುಡಿಯುವ ನೀರು ಮತ್ತು ನೈರ್ಮಲ್ಯ ವ್ಯವಸ್ಥೆ ಸುಧಾರಣೆ, ರೋಗವಾಹಕ ಮೂಲಗಳ ನಾಶ ಹಾಗೂ ಸೋಂಕು ನಿಯಂತ್ರಣಾ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗುವುದು. ಕೇಂದ್ರಗಳ ಆವರಣದಲ್ಲಿ ಔಷಧ ಸಸ್ಯಗಳ ಉದ್ಯಾನ ಹಾಗೂ ಮೀನು ಸಾಕಣಿಕೆ ತೊಟ್ಟಿಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರತಿ ತಿಂಗಳ ಮೂರನೇ ಶನಿವಾರ ಸ್ವಚ್ಛತಾ ಕಾರ್ಯಗಳ ಜತೆಗೆಸಮುದಾಯದ ಮಟ್ಟದಲ್ಲಿ ಸ್ವಚ್ಛತೆಯ ಮಹತ್ವ ಬಿಂಬಿಸುವ ಬಗ್ಗೆ ಕಿರು ಉಪನ್ಯಾಸ ಮತ್ತು ಪ್ರಾತ್ಯಕ್ಷಿಕಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.