ಹುಬ್ಬಳ್ಳಿ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರೂಪಿಸಿರುವ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಇದು ವಿದ್ಯಾರ್ಥಿಗಳಿಗೆ ಇಂದಿನ ದಿನದಲ್ಲಿ ಅತ್ಯಂತ ಅವಶ್ಯಕ ಹಾಗೂ ಅರ್ಥಪೂರ್ಣವಾಗಿದ್ದು, ಹಾದಿ ತಪ್ಪುತ್ತಿರುವ ವಿದ್ಯಾರ್ಥಿಗಳಿಗೆ ಸರಿ ದಾರಿ ತೋರಿಸುವ ದಿಕ್ಸೂಚಿಯಂತಿದೆ ಎಂದು ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಅಧ್ಯಕ್ಷ ಡಾ. ರವೀಂದ್ರ ಎಲ್ಕಾನ ಹೇಳಿದರು.
ಇಲ್ಲಿನ ಕೇಶ್ವಾಪುರದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಸ್ವಾಸ್ಥ್ಯ ಸಂಕಲ್ಪ ಯೋಜನೆಯ ಪರಿಚಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕುಟುಂಬದ ಕಣ್ಮಣಿಗಳಾಗಿದ್ದು, ಪೋಷಕರ ಅಭಿಲಾಷೆಯಂತೆ ವಿದ್ಯಾಭ್ಯಾಸದಲ್ಲಿ ತೊಡಗಿ ಪ್ರಗತಿ ಸಾಧಿಸಬೇಕು. ವಿದ್ಯಾರ್ಥಿಗಳು ತಮ್ಮ ಆರೋಗ್ಯ ಪಾಲನೆಗೆ ಹಲವು ಮೂಲ ತಿಳಿವಳಿಕೆಗಳನ್ನು ಗಳಿಸುವ ಅಗತ್ಯವಿದೆ ಎಂದರು.
ಮದ್ಯವ್ಯಸನ, ಗುಟ್ಕಾ, ಧೂಮಪಾನಗಳಿಂದ ಯುವ ಜನತೆಯ ಜೀವನ ಹಾಳಾಗುತ್ತಿದೆ. ಸಹವಾಸ ದೋಷ, ಆಕಸ್ಮಿಕ ಆಕರ್ಷಣೆಗಳ ಕಾರಣ ದುಶ್ಚಟ ಒಂದು ಬಾರಿ ಆರಂಭವಾದರೆ ಬದುಕು ವಿನಾಶದ ಹಾದಿಯಲ್ಲಿ ಸಾಗುತ್ತದೆ.ಇದರಿಂದ ವೈಯಕ್ತಿಕ ಜೀವನದ ಜತೆಗೆ ಸಮಾಜದ ಸ್ವಾಸ್ಥ್ಯ ಸಹ ಹಾಳಾಗುತ್ತದೆ ಎಂದು ವಿವರಿಸಿದರು.
ಡಾ. ಸಂಜೀವ ಕುಲಕರ್ಣಿ ಮಾತನಾಡಿ, ಸಮಾಜದಲ್ಲಿ ಆಳವಾಗಿ ಬೇರು ಬಿಟ್ಟಿರುವ ಮದ್ಯಪಾನ ಮುಂತಾದ ದುಶ್ಚಟಗಳು ಕುಟುಂಬಗಳ ಮೇಲೆ ದುಷ್ಪರಿಣಾಮವನ್ನು ಬೀರುತ್ತಿವೆ ಎಂದು ಎಚ್ಚರಿಕೆ ನೀಡಿದರು.
ಪಿರಾಜೆ ಖಂಡೇಕಾರ, ಮುಖ್ಯ ಶಿಕ್ಷಕಿ ಶೈಲ ಮುದಿಗೌಡರ, ಸಂಪನ್ಮೂಲ ವ್ಯಕ್ತಿ ಲಕ್ಷ್ಮಣ ಹಾಡಕರ್ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.