Swapna Suresh. 
ನ್ಯೂಸ್

ಸರ್ಕಾರಿ ಯೋಜನೆಗೆ ಚಿನ್ನದ ರಾಣಿಯೇ ಏಜೆಂಟ್​; ಒಂದು ಕೋಟಿ ರೂ. ಈಕೆಯ ಕಮಿಷನ್​...!

ಕೊಚ್ಚಿ: ಕೇರಳ ಚಿನ್ನ ಕಳ್ಳಸಾಗಣೆಯ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್​ ಅದೆಷ್ಟು ಪ್ರಭಾವಶಾಲಿಯಾಗಿದ್ದರು ಎಂಬುದಕ್ಕೆ ಪ್ರಬಲ ಪುರಾವೆಯೊಂದು ಸಿಕ್ಕಂತಾಗಿದೆ.

ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಸ್ವಪ್ನಾ ಸುರೇಶ್​ಗೆ ಸೇರಿದ ಬ್ಯಾಂಕ್​ ಎರಡು ಖಾತೆಗಳಿಂದ ಅಂದಾಜು ಒಂದು ಕೋಟಿ ರೂ. ನಗದು ಹಾಗೂ ಒಂದು ಕೆ.ಜಿ ಚಿನ್ನ ವಶಪಡಿಸಿಕೊಳ್ಳಲಾಗಿತ್ತು.

ಇದರ ಮೂಲವೀಗ ಪತ್ತೆಯಾಗಿದೆ. ಬ್ಯಾಂಕ್​ ಖಾತೆಯಲ್ಲಿದ್ದ ಒಂದು ಕೋಟಿ ರೂ. ಸರ್ಕಾರದ ಯೋಜನೆಗೆ ಕಾರ್ಯ ನಿರ್ವಹಿಸಿದ್ದಕ್ಕಾಗಿ ಪಡೆದ ಕಮೀಷನ್​ ಆಗಿತ್ತು ಎಂದು ಹೇಳಿದ್ದಾಳೆ.

ಲೈಫ್​ ಮಿಷನ್​ ಪ್ರಾಜೆಕ್ಟ್​ ಎಂಬುದು ಕೇರಳ ಸರ್ಕಾರದ ಪ್ರಮುಖ ಯೋಜನೆಯಾಗಿದೆ. ರಾಜ್ಯದ ಭೂರಹಿತರು ಹಾಗೂ ವಸತಿರಹಿತ ಕುಟುಂಬದವರಿಗಾಗಿ ರೂಪಿಸಿದ್ದ ಯೋಜನೆಯಾಗಿದ್ದು, ಇಂಥವರಿಗೆ ಮನೆ ಕಟ್ಟಿ ಕೊಡಲಾಗುತ್ತದೆ. ಈ ಯೋಜನೆಗೆ ತಾನು ಏಜೆಂಟ್​ ಆಗಿ ಕಾರ್ಯ ನಿರ್ವಹಿಸಿದ್ದು, ಅದಕ್ಕಾಗಿ ಪಡೆದ ಹಣ ಬ್ಯಾಂಕ್​ ಲಾಕರ್​ನಲ್ಲಿತ್ತು ಎಂದು ತನಿಖಾಧಿಕಾರಿಗಳಿಗೆ ಸ್ವಪ್ನಾ ಹೇಳಿಕೆ ನೀಡಿದ್ದಾಳೆ.

ಸ್ವಪ್ನಾಳ ಈ ಹೇಳಿಕೆ ಈಗ ಮತ್ತೊಮ್ಮೆ ಪಿಣರಾಯಿ ವಿಜಯನ್​ ಸರ್ಕಾರಕ್ಕೆ ಸಂಕಷ್ಟ ತಂದೊಡ್ಡಿದೆ. ಏಕೆಂದರೆ, ಈ ಯೋಜನೆ ಅವರ ನೇತೃತ್ವದಲ್ಲಿಯೇ ನಡೆಯುತ್ತಿತ್ತು ಹಾಗೂ ಇದಕ್ಕಾಗಿ 20 ಕೋಟಿ ರೂ. ಧನಸಹಾಯ ಪಡೆಯಲು ಸಿಎಂ ಯುಎಇಗೆ ಪ್ರಯಾಣಿಸಿದ್ದರು.

ಮಹತ್ವದ ವಿಚಾರವೆಂದರೆ, ಇದಕ್ಕೂ ಮುನ್ನ ಸ್ವಪ್ನಾ ಸುರೇಶ್​ ಹಾಗೂ ಅಮಾನತುಗೊಂಡಿರುವ ಐಟಿ ಕಾರ್ಯದರ್ಶಿ ಎಂ. ಶಿವಶಂಕರನ್​ ಯುಎಇಗೆ ತೆರಳಿದ್ದರು. ಈ ವಿಚಾರವಾಗಿ ಸಿಎಂ ಶುದ್ಧಹಸ್ತರಾಗಿ ಹೊರಹೊಮ್ಮಬೇಕು ಎಂದು ಕಾಂಗ್ರೆಸ್​ ಆಗ್ರಹಿಸಿದೆ.