ಬೆಂಗಳೂರು: ಶಾಂತತೆಯೇ ಮೂರ್ತಿವೆತ್ತಂತೆ ಸ್ಥಿತಪ್ರಜ್ಞತ್ವದಿಂದ, ಸರಳವಾದ ನಡೆನುಡಿಯಿಂದ ಕೋಟ್ಯಂತರ ಭಕ್ತರ ಮನದಲ್ಲಿ ಶಾಶ್ವತ ಸ್ಥಾನಪಡೆದಿರುವ ವಿರಾಗಿ ಜ್ಞಾನಯೋಗಾಶ್ರಮ ಸಿದ್ಧೇಶ್ವರ ಶ್ರೀಗಳು. ಆಧ್ಯಾತ್ಮ, ವೇದಾಂತವನ್ನು ದೃಷ್ಟಾಂತಗಳ ಮೂಲಕ ಎಳೆಎಳೆಯಾಗಿ ಬಿಡಿಸಿ ಹೇಳುತ್ತಿದ್ದರೆ ಕೇಳುಗರ ಕರ್ಣಾನಂದ ವರ್ಣಿಸಲಸದಳ. ನುಡಿದಂತೆಯೇ ನಡೆಯುವ ಸಿದ್ಧೇಶ್ವರ ಶ್ರೀಗಳು, ವಿಶ್ವಾದ್ಯಂತ ಇರುವ ಒಳ್ಳೆಯ ಅಂಶಗಳನ್ನೆಲ್ಲಾ ಒಟ್ಟುಗೂಡಿಸಿ ಅದನ್ನು ಸರಳವಾಗಿ ಅರ್ಥೈಸುವಂತೆ ತಮ್ಮ ಪ್ರವಚನಗಳಲ್ಲಿ ವಿವರಿಸುತ್ತಿದ್ದ ಮಹಾನ್ ಚೇತನ. ಇಂತಹ ಸ್ವಾಮೀಜಿ, ಸಣ್ಣ ವಯಸ್ಸಿನಲ್ಲೂ ಮಹಾ ಮೇಧಾವಿಯಾಗೇ ಇದ್ದವರು. ಇವರು ತಮ್ಮ 20ನೆ ವಯಸ್ಸಿಗೇ ಸಿದ್ಧಾಂತ ಶಿಖಾಮಣಿ ಪುಸ್ತಕವನ್ನು ಅನುವಾದ ಮಾಡಿದ್ದರು!
1960ರಲ್ಲಿ ಮಲ್ಲಿಕಾರ್ಜುನ ಶ್ರೀಗಳು ಕೊಲ್ಲಾಪುರದಲ್ಲಿ ಮರಾಠಿಯಲ್ಲಿ ‘ಸಿದ್ಧಾಂತ ಶಿಖಾಮಣಿ’ ಪ್ರವಚನ ಮಾಡುತ್ತಿರುವಾಗ, ತಮ್ಮ ಪ್ರಿಯ ಶಿಷ್ಯ ‘ಸಿದ್ಧೇಶ್ವರ’ರಿಗೆ ಅದನ್ನು ಕನ್ನಡದಲ್ಲಿ ಟಿಪ್ಪಣಿ ಮಾಡಲು ಹೇಳಿದರಂತೆ. ಪ್ರವಚನ ಮುಕ್ತಾಯ ಸಮಾರಂಭದ ಹೊತ್ತಿಗೆ ಅದು 400 ಪುಟಗಳ ಹೊತ್ತಿಗೆಯಾಗಿತ್ತು. ಶಿಷ್ಯನ ಅದ್ಭುತ ಬರವಣಿಗೆ ಕಂಡು ಮಲ್ಲಿಕಾರ್ಜುನ ಶ್ರೀಗಳು ಅದನ್ನು ಮುದ್ರಿಸಲು ಅನುಮತಿಸಿದರು. ಅದೇ ‘ಸಿದ್ಧಾಂತ ಶಿಖಾಮಣಿ’ ಗ್ರಂಥದ ಮೊದಲ ಆವೃತ್ತಿ. ಹೀಗೆ ಮಲ್ಲಿಕಾರ್ಜುನ ಶ್ರೀಗಳ ಕೃಪಾಶೀರ್ವಾದದಿಂದ ವಿಜಯಪುರ ಸೇರಿ ವಿವಿಧೆಡೆ ಪುರಾಣ ಪ್ರವಚನ ನಡೆಸಿಕೊಡುತ್ತಿದ್ದ ಸಿದ್ಧೇಶ್ವರ ಶ್ರೀಗಳು ಪ್ರಸಿದ್ಧಿ ಪಡೆದರಲ್ಲದೆ, ಅವರಲ್ಲಿರುವ ಅಗಾಧ ಪಾಂಡಿತ್ಯಕ್ಕೆ ಮನಸೋತ ಜಿಲ್ಲೆಯ ಜನತೆ ಅವರನ್ನು ‘ಬುದ್ಧೀಜಿ’ ಎಂದು ಕರೆಯಲಾರಂಭಿಸಿದರು.