ನವದೆಹಲಿ: ಅಕ್ಟೋಬರ್ 2 ಗಾಂಧಿ ಜಯಂತಿಗೆ ಒಂದು ದಿನ ಮುನ್ನ ಅಕ್ಟೋಬರ್ 1 ದೇಶಾದ್ಯಂತ ಸ್ವಚ್ಛತಾ ಅಭಿಯಾನಕ್ಕೆ ಕರೆ ನೀಡಿದ್ದ ಪ್ರಧಾನಿ ಮೋದಿ ಅವರ ಆಶಯಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶ್ರಮದಾನ ಮಾಡಿದರು. ಕುಸ್ತಿಪಟು ಅಂಕಿತ್ ಬೈಯನ್ ಪುರಿಯಾ ಜತೆ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು.
ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಕೇವಲ ನಾವು ಸ್ವಚ್ಛತೆಯ ಬಗ್ಗೆ ಮಾತ್ರ ಗಮನಹರಿಸಿಲ್ಲ, ಸ್ವಚ್ಛ ಹಾಗೂ ಸ್ವಸ್ತ್ ಭಾರತ್ ಗಮನದಲ್ಲಿಟ್ಟುಕೊಂಡು ಫಿಟ್ನೆಸ್ಗೂ ಒತ್ತು ನೀಡಿದ್ದೇವೆ. ಇದೆಲ್ಲ ಸ್ವಚ್ಛ ಭಾರತಕ್ಕಾಗಿ ಎಂದು ಹೇಳಿದ್ದಾರೆ.
ಮಹಾತ್ಮ ಗಾಂಧೀಜಿಯವರ ಜನ್ಮದಿನದ ಸ್ಮರಣಾರ್ಥ ಅಕ್ಟೋಬರ್ 1 ರಂದು ಬೆಳಗ್ಗೆ ಏಕ್ ತಾರೀಖ್, ಏಕ್ ಘಂಟಾ, ಏಕ್ ಸಾಥ್ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಮೋದಿ ಮನವಿ ಮಾಡಿದ್ದರು. ದೇಶಾದ್ಯಂತ 1 ಗಂಟೆಗಳ ಕಾಲ ಶ್ರಮದಾನ ನಡೆದಿದೆ. ಬೆಳಗ್ಗೆ 10 ಗಂಟೆಯಿಂದ ಬೆಳಗ್ಗೆ 11 ಗಂಟೆವರೆಗೆ ದೇಶಾದ್ಯಂತ ಎಲ್ಲ ನಗರ, ಪಟ್ಟಣ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.
ಪ್ರಧಾನಿ ಮೋದಿಯವರ ಸ್ವಚ್ಛತಾ ಅಭಿಯಾನದಲ್ಲಿ ದೇಶಾದ್ಯಂತದ ರಾಜಕೀಯ ನಾಯಕರು ಸಕ್ರಿಯವಾಗಿ ಪಾಲ್ಗೊಂಡರು. ಬಿಜೆಪಿ ನಾಯಕರೂ ಕೂಡಾ ಪ್ರಧಾನಿ ಮೋದಿ ಅವರು ನೀಡಿದ್ದ ಕರೆಗೆ ಪೂರಕವಾಗಿ ಸ್ಪಂದಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ, ಹಲವು ಕೇಂದ್ರ ಸಚಿವರು ಹಾಗೂ ಸಂಸದರು ಬೀದಿಗಳಿದು ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದರು. ದೇಶಾದ್ಯಂತ ಈ ಕಾರ್ಯಕ್ರಮ ನಡೆಯಿತು.