ನ್ಯೂಸ್

ಮ್ಯಾನ್ಮಾರ್​ ಸಾರ್ವತ್ರಿಕ ಚುನಾವಣೆ ಇಂದು: ಗೆಲುವಿನ ನಿರೀಕ್ಷೆಯಲ್ಲಿದ್ದಾರೆ ಆಂಗ್ ಸಾನ್​ ಸೂ ಕಿ

ಯಾನ್​ಗೋನ್​: ಮ್ಯಾನ್ಮಾರ್​ನಲ್ಲಿ ಸಂಸತ್ ಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು, ಬೆಳಗ್ಗೆಯೇ ಮತದಾನ ಶುರುವಾಗಿದೆ. ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಆಂಗ್ ಸಾನ್ ಸೂ ಕಿ ಅವರ ನೇತೃತ್ವದ ನ್ಯಾಷನಲ್ ಲೀಗ್​ ಫಾರ್ ಡೆಮಾಕ್ರಸಿ ಪಾರ್ಟಿ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಜನರು ಕೂಡ ಸೂ ಕಿ ನೇತೃತ್ವಕ್ಕೆ ಒಲವು ತೋರಿರುವುದು ಕಂಡುಬಂದಿದೆ.

ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನ 440 ಸ್ಥಾನ ಮತ್ತು ಹೌಸ್ ಆಫ್ ನ್ಯಾಷನಲಿಟೀಸ್​ನ 224 ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಇದಲ್ಲದೆ ವಿವಿಧ ಅಸೆಂಬ್ಲಿ ಚುನಾವಣೆಗಳೂ ನಡೆಯುತ್ತಿದ್ದು, ಎರಡೂ ಸೇರಿ ಒಟ್ಟಾರೆ 1,171 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಕಣದಲ್ಲಿರುವ ಪಕ್ಷಗಳ ಪೈಕಿ ಸೂ ಕಿ ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಾರ್ಟಿ (ಎನ್​ಎಲ್​ಡಿ) ಮತ್ತು ಥಾನ್ ಹೆಟೇ ಅವರ ಯೂನಿಯನ್ ಸೋಲಿಡಾರಿಟಿ ಆ್ಯಂಡ್ ಡೆವಲಪ್​ಮೆಂಟ್ ಪಾರ್ಟಿ (ಯುಎಸ್​ಡಿಪಿ) ಪ್ರಮುಖವಾದವು. ಚುನಾವಣಾ ಕಣದಲ್ಲಿ 90ಕ್ಕೂ ಹೆಚ್ಚು ಪಕ್ಷಗಳ ಅಭ್ಯರ್ಥಿಗಳಿದ್ದಾರೆ. 3.7 ಕೋಟಿ ಮತದಾರರಿದ್ದು, ಈ ಪೈಕಿ 50 ಲಕ್ಷ ಮತದಾರರು ಹೊಸಬರು.

ಐದು ದಶಕಗಳ ಮಿಲಿಟರಿ ಆಡಳಿತದ ಬಳಿಕ 2015ರಲ್ಲಿ ನಡೆದ ಚುನಾವಣೆಯಲ್ಲಿ ಸೂ ಕಿ ಅವರ ಎನ್​ಎಲ್​ಡಿ ಭರ್ಜರಿ ಬಹುಮತ ಪಡೆದು ಆಡಳಿತ ಚುಕ್ಕಾಣಿ ಹಿಡಿದಿತ್ತು. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ ನ 440 ಸ್ಥಾನಗಳ ಪೈಕಿ ಎನ್​ಎಲ್​ಡಿಗೆ 255 ಮತ್ತು ಹೌಸ್​ ಆಫ್​ ನ್ಯಾಷನಲಿಟೀಸ್​ನ 224 ಸ್ಥಾನಗಳ ಪೈಕಿ 135 ಸ್ಥಾನಗಳು ದಕ್ಕಿದ್ದವು. ವಿಪಕ್ಷ ಸ್ಥಾನದಲ್ಲಿರುವ ಯುಎಸ್​ಡಿಪಿಗೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ ನಲ್ಲಿ 30, ಹೌಸ್​ ಆಫ್​ ನ್ಯಾಷನಲಿಟೀಸ್​ನಲ್ಲಿ 11 ಸ್ಥಾನಗಳಷ್ಟೇ ಇರುವುದು. ಉಳಿದವೆಲ್ಲ ಚಿಕ್ಕಪುಟ್ಟ ಪಕ್ಷಗಳ ಪಾಲಾಗಿವೆ. (ಏಜೆನ್ಸೀಸ್)