Girl Murder: ಉತ್ತರ ಪ್ರದೇಶದಲ್ಲಿ ಮೂರು ವರ್ಷದ ಬಾಲಕಿಯನ್ನು ನೆರೆಮನೆಯ ಮಹಿಳೆಯೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ತಂತ್ರ-ಮಂತ್ರದ ಆಚರಣೆಗಳಲ್ಲಿ ಆಸಕ್ತಿ ಹೊಂದಿದ್ದಳು ಎನ್ನಲಾದ ಸೋನಂ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಬುಲಂದ್ಶಹರ್ನ ಕೊತ್ವಾಲಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅವಂತಿ ನಗರ ಭೂಡ್ ಪ್ರದೇಶದಲ್ಲಿ ನವೆಂಬರ್ 21ರಂದು ಬಾಲಕಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಡಯಲ್ 112 ಮೂಲಕ ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸರು, ಸ್ವಾಟ್ (SWAT) ಹಾಗೂ ಕಣ್ಗಾವಲು ತಂಡಗಳ ಸಹಕಾರದೊಂದಿಗೆ ಬಾಲಕಿಗಾಗಿ ಶೋಧ ಕಾರ್ಯ ಆರಂಭಿಸಿದ್ದರು.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರಿಗೆ ಬಾಲಕಿ ಸುತ್ತಮುತ್ತಲಿನಲ್ಲೇ ಇರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಮನೆಗಳಲ್ಲಿ ಹುಡುಕಾಟ ನಡೆಸಿದಾಗ, ನೆರೆಮನೆಯ ಸೋನಂ ವಾಸವಿದ್ದ ಕೋಣೆ ಬೀಗ ಹಾಕಿರುವುದು ಗಮನಕ್ಕೆ ಬಂದಿದೆ. ಎಷ್ಟು ಹೊತ್ತಾದರೂ ಬಾಗಿಲು ತೆರೆಯದಿದ್ದರಿಂದ ಅನುಮಾನಗೊಂಡ ಪೊಲೀಸರು ಬೀಗ ಒಡೆದು ಒಳಗೆ ಪ್ರವೇಶಿಸಿದ್ದಾರೆ. ಈ ವೇಳೆ ಕೋಣೆಯೊಳಗೆ ಬಾಲಕಿಯ ಮೃತದೇಹ ಪತ್ತೆಯಾಗಿದೆ.
ಪೊಲೀಸರ ವಿಚಾರಣೆ ವೇಳೆ ಸೋನಂ ಬಾಲಕಿಯನ್ನು ತನ್ನ ಕೋಣೆಗೆ ಕರೆದುಕೊಂಡು ಹೋಗಿ ಉಸಿರುಗಟ್ಟಿಸಿ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಹುಡುಕಾಟ ನಡೆಸುತ್ತಿರುವುದನ್ನು ಗಮನಿಸಿದ ಆಕೆ ಅಲ್ಲಿಂದ ಪರಾರಿಯಾಗಿದ್ದಳು. ರಾತ್ರಿ ಮರಳಿ ಬಂದು ಮೃತದೇಹವನ್ನು ವಿಲೇವಾರಿ ಮಾಡುವ ಉದ್ದೇಶದಿಂದ ಕೋಣೆಗೆ ಬೀಗ ಹಾಕಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಸೋನಂ ತನ್ನ ಮಗಳಿಂದ ದೂರವಾಗಿದ್ದರಿಂದ ಮಾನಸಿಕವಾಗಿ ನೊಂದಿದ್ದಳು ಎನ್ನಲಾಗಿದೆ. ಈ ಹಿಂದೆ ತನ್ನ ಮಗಳನ್ನು ಮನೆಯ ಟೆರೇಸ್ನಿಂದ ಕೆಳಕ್ಕೆ ಎಸೆದ ಆರೋಪ ಆಕೆಯ ಮೇಲಿತ್ತು. ಈ ಘಟನೆಯ ಬಳಿಕ ಮಗಳನ್ನು ತಂದೆಯೊಂದಿಗೆ ದೆಹಲಿಯಲ್ಲಿ ಇರಲು ಕಳುಹಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಸೋನಂಗೆ ತಂತ್ರ-ಮಂತ್ರದ ಆಚರಣೆಗಳ ಬಗ್ಗೆ ಆಸಕ್ತಿ ಇತ್ತು ಎಂದು ಪೊಲೀಸರು ಹೇಳಿದ್ದಾರೆ. ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಂಳನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.