ಬೆಂಗಳೂರು: ಪ್ರಯಾಣದ ವೇಳೆ ಚಾಲಕನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಯುವತಿಗೆ ಪರಿಹಾರವಾಗಿ 5 ಲಕ್ಷ ರೂ. ನೀಡುವಂತೆ ಓಲಾ ಕ್ಯಾಬ್‌ನ ಮಾತೃ ಸಂಸ್ಥೆ ಎಎನ್‌ಐ ಟೆಕ್ನಾಲಜೀಸ್ ಪ್ರೆವೇಟ್ ಲಿಮಿಟೆಡ್ ಗೆ ನಿರ್ದೇಶಿಸಿ ಏಕಸದಸ್ಯ ಪೀಠ ಹೊರಡಿಸಿದ್ದ ಆದೇಶಕ್ಕೆ ವಿಭಾಗೀಯ ಪೀಠ ಶುಕ್ರವಾರ ತಡೆ ನೀಡಿದೆ. ಅಲ್ಲದೆ, ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದೆ.
ಪ್ರಕರಣ ಸಂಬಂಧ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಎಎನ್‌ಐ ಟೆಕ್ನಾಲಜೀಸ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್ ಕೃಷ್ಣ ಕುಮಾರ್ ಮತ್ತು ಎಂ.ಜಿ ಉಮಾ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಧ್ಯಾನ್ ಚಿನ್ನಪ್ಪ ವಾದ ಮಂಡಿಸಿ, ಪರಿಹಾರ ಪಾವತಿಸುವ ಬಗ್ಗೆ ಅಷ್ಟೇ ನಮ್ಮ ಆಕ್ಷೇಪವಲ್ಲ. ಹೊರತಾಗಿ 2013 ರ ಮಹಿಳೆಗೆ ಲೈಂಗಿಕ ಕಿರುಕುಳ (ನಿಷೇಧ, ತಡೆ ಮತ್ತು ಪರಿಹಾರ) ಕಾಯ್ದೆಯ ವಿಚಾರ. ಇದರ ಅನ್ವಯ ನಾವು ಚಾಲಕರಿಗೆ ಉದ್ಯೋಗ ನೀಡಿಲ್ಲ. ಓಲಾ ಸೇವೆಯನ್ನು ಚಾಲಕರು ಬಳಸಿಕೊಳ್ಳುತ್ತಾರೆ. ಚಾಲಕರು ಸ್ವತಂತ್ರ ಗುತ್ತಿಗೆದಾರರಾಗಿದ್ದಾರೆ ಎನ್ನುವುದನ್ನು ನ್ಯಾಯಪೀಠದ ಗಮನಕ್ಕೆ ತಂದರು. ಮುಂದುವರಿದು ಅರ್ಜಿಯಲ್ಲಿನ ಎಲ್ಲ ಅಂಶವನ್ನು ಗಂಭೀರವಾಗಿ ಪರಿಗಣಿಸಿ ಏಕಸದಸ್ಯ ಪೀಠ ಆದೇಶವನ್ನು ರದ್ದುಗೊಳಿಸುವಂತೆ ನ್ಯಾಯಪೀಠವನ್ನು ಮನವಿ ಮಾಡಿದರು.
ವಾದ ಆಲಿಸಿದ ನ್ಯಾಯಪೀಠ ಪ್ರಕರಣದ ಕುರಿತಾಗಿ ವಿಚಾರಣೆಯ ಅಗತ್ಯವಿದೆ. ಹೀಗಾಗಿ, ಮುಂದಿನ ವಿಚಾರಣೆವರೆಗೂ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿದ್ದು, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಅ. 28ಕ್ಕೆ ವಿಚಾರಣೆ ಮುಂದೂಡಲಾಗಿದೆ ಎಂದಿತು.