ಪ್ರಬಲ ಗಾಳಿಗೆ ಅಲುಗಾಡಿದ ತೂಗು ಸೇತುವೆ ಹಿಡಿದು ನಿಂತ ಜರ್ಮನ್ ಪ್ರವಾಸಿಗ 
ನ್ಯೂಸ್

ಗಾಳಿಯ ರಭಸಕ್ಕೆ 180 ಡಿಗ್ರಿ ತಿರುಗಿದ ತೂಗು ಸೇತುವೆ! ಕೂದಲೆಳೆ ಅಂತರದಲ್ಲಿ ಪಾರಾದ ಜರ್ಮನ್ ಪ್ರವಾಸಿಗ | German tourist

German tourist: ಜರ್ಮನ್ ಪ್ರವಾಸಿಗನೊಬ್ಬ ಪ್ರಕೃತಿ ಸೌಂದರ್ಯ ಸವಿಯಲು ಪ್ರವಾಸಕ್ಕೆ ತೆರಳಿದ್ದ ವೇಳೆ ಭಯಾನಕ ಅನುಭವ ಎದುರಿಸಿದ್ದಾನೆ. ಚಿಲಿಯ ಟೊರೆಸ್ ಡೆಲ್ ಪೈನ್ ರಾಷ್ಟ್ರೀಯ ಉದ್ಯಾನವನದಲ್ಲಿ ಭಾರೀ ಗಾಳಿಯ ಹೊಡೆತಕ್ಕೆ ತೂಗು ಸೇತುವೆಯೊಂದು ಅಲುಗಾಡಿದ್ದು, ಸೇತುವೆ ದಾಟುತ್ತಿದ್ದ ಪ್ರವಾಸಿಗ ಆತಂಕಗೊಂಡಿದ್ದಾರೆ. ಗಾಳಿಯ ರಭಸಕ್ಕೆ ಸೇತುವೆ ಅಲುಗಾಡುತ್ತಿರುವ ದೃಶ್ಯ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ದಕ್ಷಿಣ ಚಿಲಿಯ ಮ್ಯಾಗಲನೆಸ್ ಪ್ರದೇಶದಲ್ಲಿರುವ ಟೊರೆಸ್ ಡೆಲ್ ಪೈನ್ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಘಟನೆ ನಡೆದಿದೆ. ಕಣಿವೆಯ ಮೇಲಿರುವ ತೂಗು ಸೇತುವೆ ದಾಟುತ್ತಿದ್ದಾಗ ಏಕಾಏಕಿ ಭಾರೀ ಗಾಳಿ ಬೀಸಿದೆ. ಗಾಳಿಯ ರಭಸಕ್ಕೆ ಸೇತುವೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಜೋರಾಗಿ ಅಲುಗಾಡಲು ಶುರುವಾಗಿದ್ದು, ಪ್ರವಾಸಿಗರು ಆತಂಕಗೊಂಡಿದ್ದಾರೆ.

ಮಾಹಿತಿಯ ಪ್ರಕಾರ, ಜರ್ಮನಿಯ ಡಸೆಲ್ಡಾರ್ಫ್ ಮೂಲದ ಹೆನ್ರಿ ಎಂಬ ಪ್ರವಾಸಿಗ ಈ ಘಟನೆಗೆ ಸಿಲುಕಿದ್ದಾರೆ. ಗಾಳಿ ಜೋರಾಗುವ ಮುನ್ನವೇ ಅವರ ಗೆಳತಿ ಸೇತುವೆ ದಾಟಿದ್ದರು. ಆಗ ಸೇತುವೆ ಶಾಂತವಾಗಿದ್ದರಿಂದ ಹೆನ್ರಿ ಕೂಡ ಅದನ್ನು ದಾಟಲು ಮುಂದಾಗಿದ್ದರು. ಆದರೆ, ಅವರು ಸೇತುವೆಯ ಮೇಲೆ ಹೆಜ್ಜೆ ಇಡುತ್ತಿದ್ದಂತೆ ಗಾಳಿಯ ರಭಸ ಹೆಚ್ಚಾಗಿ, ಸೇತುವೆ ಜೋರಾಗಿ ಅಲುಗಾಡಲಾರಂಭಿಸಿದೆ.

ಸೇತುವೆ ಅಲುಗಾಡುತ್ತಿದ್ದಂತೆ ಹೆನ್ರಿ ಅದನ್ನು ಬಿಗಿಯಾಗಿ ಹಿಡಿದುಕೊಂಡಿದ್ದರು. ಅವರ ಜೊತೆಗಿದ್ದ ಪ್ರವಾಸಿಗರು ಕೂಡ ಗಾಳಿಯ ರಭಸಕ್ಕೆ ಸೇತುವೆ ಮೇಲೆ ನಿಲ್ಲಲು ಕಷ್ಟಪಡಬೇಕಾಯಿತು. ಪರಿಸ್ಥಿತಿ ಮತ್ತಷ್ಟು ಭಯಾನಕವಾಗುತ್ತಿದ್ದಂತೆ ಎಲ್ಲರೂ ಸೇತುವೆಯನ್ನು ಹಿಡಿದುಕೊಂಡು ಸುರಕ್ಷಿತವಾಗಿರಲು ಪ್ರಯತ್ನಿಸಿದರು.

ಗುಂಪಿನ ಮತ್ತೊಬ್ಬ ಸದಸ್ಯ ಮಾರ್ಟಿನ್ ಗೊನ್ಜಾಲೆಜ್ ಹೇಳುವ ಪ್ರಕಾರ, ಅವರು ಕಣಿವೆಯನ್ನು ದಾಟಿದ ಬಳಿಕವೂ ಗಾಳಿಯ ಹೊಡೆತಕ್ಕೆ ಸೇತುವೆ ಸಂಪೂರ್ಣ 180 ಡಿಗ್ರಿ ತಿರುಗಿತ್ತು. ಬಳಿಕ ಮತ್ತೆ ತನ್ನ ಮೊದಲಿನ ಸ್ಥಿತಿಗೆ ಬಂದರೂ, ಜೋರಾಗಿ ಅಲುಗಾಡುತ್ತಲೇ ಇತ್ತು.

ಘಟನೆ ನಡೆದ ಬಳಿಕ ಚಿಲಿಯ ರಾಷ್ಟ್ರೀಯ ಅರಣ್ಯ ನಿಗಮ (CONAF) ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಇತರ ಪ್ರವಾಸಿಗರು ಸೇತುವೆ ದಾಟದಂತೆ ತಡೆದಿದ್ದಾರೆ. ಆದರೆ, ಹವಾಮಾನ ಈಗಾಗಲೇ ಹದಗೆಟ್ಟಿದ್ದರೂ ಸೇತುವೆ ಪ್ರವೇಶಕ್ಕೆ ಮೊದಲೇ ನಿರ್ಬಂಧ ವಿಧಿಸದಿರುವುದಕ್ಕೆ ಪ್ರವಾಸಿಗರು ಪ್ರಶ್ನೆ ಎತ್ತಿದ್ದಾರೆ.

ಇದನ್ನೂ ಓದಿ: ಒಂದೇ ಮೊಟ್ಟೆಯಲ್ಲಿ ಎರಡು ಹಳದಿ ಭಾಗ! ಇದು ಹೇಗೆ ಸಾಧ್ಯ? ತಿನ್ನಬಹುದಾ? | Double Yolk Egg

ಟೊರೆಸ್ ಡೆಲ್ ಪೈನ್ ರಾಷ್ಟ್ರೀಯ ಉದ್ಯಾನವನ ಚಿಲಿಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು, ಟ್ರೆಕ್ಕಿಂಗ್ ಹಾಗೂ ಸಾಹಸ ಪ್ರವಾಸಗಳಿಗೆ ಹೆಸರುವಾಸಿಯಾಗಿದೆ. ಆದ್ರೆ, ಇಲ್ಲಿ ಹವಾಮಾನ ಕ್ಷಣಕ್ಷಣಕ್ಕೂ ಬದಲಾಗುವ ಸಾಧ್ಯತೆ ಇರೋದ್ರಿಂದ ಪ್ರವಾಸಿಗರು ಎಚ್ಚರಿಕೆಯಿಂದ ಇರಬೇಕು.