ನ್ಯೂಸ್

ಕೊನೆವರೆಗೂ ನಿಗೂಢ, ಕೊನೇಲಿ ರೋಚಕ: ಸಿನಿಮಾದಂತಾದ ಬಿಜೆಪಿ ಅಭ್ಯರ್ಥಿ ಆಯ್ಕೆ..

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ರಹಸ್ಯ, ರೋಚಕ ಸಿನಿಮಾದಂತೆ ತಿರುವು ಪಡೆದು, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಮಂಗಳವಾರ ಬೆಳಗ್ಗೆ ಪಟ್ಟಿ ಅಂತಿಮವಾಯಿತು. ಅಳೆದೂ ತೂಗಿ ಆರಿಸಿದ ನಾಲ್ಕು ಅಭ್ಯರ್ಥಿಗಳ ಪೈಕಿ ಮೂವರು ವಲಸಿಗರಾಗಿದ್ದರೆ, ಒಬ್ಬರು ಮಾತ್ರ ಸಂಘ ಮೂಲದ ಸಂಘಟನೆ ಹಿನ್ನೆಲೆಯುಳ್ಳವರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ, ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಟಿಕೆಟ್ ಕೈತಪ್ಪಲಿದೆ ಎಂಬ ಅನುಮಾನ ಕೊನೆ ಗಳಿಗೆಯಲ್ಲಿ ನಿಜವಾಗಿದೆ. ಪಕ್ಷದ ರಾಜ್ಯ ಕೋರ್ ಕಮಿಟಿ ಶಿಫಾರಸು ಮಾಡಿದ ಪಟ್ಟಿಯಲ್ಲಿನ ಹೆಸರುಗಳು ಆಯ್ಕೆಯಾಗಿವೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮೇಲುಗೈ ಸಾಧಿಸಿರುವುದು ನಿಚ್ಚಳ.

ಅಸ್ಪಷ್ಟತೆ, ಗೊಂದಲ: ಸಂಘ, ಸಂಘಟನೆ ಹಿನ್ನೆಲೆ ಇತ್ಯಾದಿ ಮಾನದಂಡಗಳ ಬಗ್ಗೆ ವರಿಷ್ಠರ ಪೈಕಿ ಕೆಲವರಿಗೆ ಅಸ್ಪಷ್ಟತೆ, ಯಾರನ್ನು ಬಿಡಬೇಕು ಅಥವಾ ಸೇರಿಸಬೇಕು ಎಂಬ ಗೊಂದಲಕ್ಕೆ ಸಿಲುಕಿದರು. ಇದರಿಂದಾಗಿ ಸಂಭಾವ್ಯರ ಪಟ್ಟಿಯಲ್ಲಿದ್ದ ಎಲ್ಲರನ್ನು ಪಕ್ಷದ ರಾಜ್ಯ ಕಚೇರಿಗೆ ಮಂಗಳವಾರ ಬೆಳಗ್ಗೆ ಕರೆಯಿಸಿಕೊಂಡಿದ್ದರು. ತಡರಾತ್ರಿ ಸಿದ್ಧವಾದ ಪಟ್ಟಿಗೆ ಕತ್ತರಿ ಪ್ರಯೋಗವಾಗಿದ್ದು, ಕೊನೆಯದಾಗಿ ಒಂದು ಹೆಸರು ಬದಲಾಯಿತು ಎಂದು ಮೂಲಗಳು ಮಾಹಿತಿ ನೀಡಿವೆ. ಕೊಪ್ಪಳದ ಹೇಮಲತಾ ನಾಯಕ ಅವರಿಗೆ ಬೆಳಗ್ಗೆ 9ರ ನಂತರ ಸಂದೇಶ ನೀಡಿದ್ದು, ಸಕಾಲಕ್ಕೆ ಬರದಿದ್ದರೆ ಎಡವಟ್ಟಾದೀತು ಎಂದು ಅರಿತು ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದರು. ಯಾವುದಕ್ಕೂ ಜತೆಗೆ ಸಿದ್ಧರಾಗಿರಿ ಎಂಬ ಸೂಚನೆಯಂತೆ ಗೀತಾ ವಿವೇಕಾನಂದ ಅಗತ್ಯ ದಾಖಲೆಗಳೊಂದಿಗೆ ಪಕ್ಷದ ರಾಜ್ಯ ಕಚೇರಿಗೆ ದೌಡಾಯಿಸಿದ್ದರು ಎಂದು ಮೂಲಗಳು ಹೇಳಿವೆ. ಹುಬ್ಬಳ್ಳಿಯಿಂದ ರಾತೋರಾತ್ರಿ ಪ್ರಯಾಣಿಸಿ ಪಕ್ಷದ ರಾಜ್ಯ ಕಚೇರಿಯಲ್ಲಿ ಬೆಳಗ್ಗೆ ಪ್ರತ್ಯಕ್ಷವಾದ ಪಕ್ಷದ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ (ಲಿಂಪಾ) ಕೊನೆಗೆ ನಿರಾಸೆ ಮಡುವಿಗೆ ಬಿದ್ದರು. ರಾಜ್ಯ ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷ ಶಿವಮೊಗ್ಗದ ಸಿ.ಮಂಜುಳಾ ವರಿಷ್ಠರ ಕರೆಯ ಮೇರೆಗೆ ಬಂದಿರುವುದನ್ನು ಸುದ್ದಿಗಾರರಿಗೆ ಖಚಿತಪಡಿಸಿದರು.

ವಲಸಿಗರು ಮುಂದು: ಸಂಘ ಮೂಲ, ಪಕ್ಷ ನಿಷ್ಠೆ, ಹಿರಿತನ, ಸೇವಾಮನೋಭಾವಕ್ಕೆ ಪ್ರಾಶಸ್ಱ. ಕುಟುಂಬ ರಾಜಕಾರಣ, ಲಾಬಿಗೆ ಮಣಿಯದ ಶಿಸ್ತಿನ ಪಕ್ಷವೆಂದು ಹೇಳುವ ನಾಯಕರೇ ವಿರೋಧಾಭಾಸದ ನಿಲುವು ತಳೆದಿದ್ದಾರೆ ಎಂಬ ಟೀಕೆಗೆ ಗುರಿಯಾಗಿದ್ದಾರೆ. ಪಕ್ಷ ಅಧಿಕಾರಕ್ಕೆ ಬರಲು ಕಾರಣರಾದವರು ಎಂಬುದನ್ನು ಮುಂದೆ ಮಾಡಿ ಸಚಿವ ಸಂಪುಟದಲ್ಲಿ ಸಿಂಹಪಾಲು ವಲಸಿಗರಿಗೆ ನೀಡಿದ್ದು, ಮೇಲ್ಮನೆ ಟಿಕೆಟ್ ಪಡೆಯುವಲ್ಲಿ ವಲಸಿಗರು ಮುಂದಿರುವುದು ಪಕ್ಷ ನಿಷ್ಠರ ಕೆಂಗಣ್ಣಿಗೆ ಗುರಿಯಾಗಿದೆ. ಮತ್ತೊಂದು ಬಾರಿ ಮೇಲ್ಮನೆ ಪ್ರವೇಶಿಸಲು ಅವಕಾಶ ಗಿಟ್ಟಿಸಿಕೊಂಡ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಜನತಾ ಪರಿವಾರ ಮೂಲದವರು. ಮೂಲತಃ ಕಾಂಗ್ರೆಸ್ಸಿಗರಾದ ಛಲವಾದಿ ನಾರಾಯಣಸ್ವಾಮಿ ಕಳೆದ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿಗೆ ಸೇರಿ ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷರಾಗಿದ್ದರು. ಸಂಸದ ಸಂಗಣ್ಣ ಕರಡಿಯವರನ್ನು ಹಿಂಬಾಲಿಸಿ ಜೆಡಿಯು ತೊರೆದ ಹೇಮಲತಾ ನಾಯಕ್ 11 ವರ್ಷಗಳ ಹಿಂದೆಯಷ್ಟೇ ಬಿಜೆಪಿಗೆ ಸೇರ್ಪಡೆಯಾದರು. ಕೊಪ್ಪಳ ನಗರಸಭೆ ಚುನಾವಣೆಗೆ ಜೆಡಿಎಸ್​ನಿಂದ ಸ್ಪರ್ಧಿಸಿ ಸೋತಿದ್ದರು. ಕಳೆದ ಬಾರಿ ಟಿಕೆಟ್ ಕೇಳಿದರೂ ಬಿಜೆಪಿ ನಿರಾಕರಿಸಿತ್ತು. ಇದೀಗ ಕೌನ್ಸಿಲರ್ ಅಲ್ಲ, ಕೌನ್ಸಿಲ್ ಮೆಂಬರ್ ಮಾಡಲು ಆಸಕ್ತಿ ತೋರಿಸಿರುವುದು ಪಕ್ಷದ ಕಾರ್ಯಕರ್ತರನ್ನು ಅಚ್ಚರಿಗೀಡು ಮಾಡಿದೆ.

ವ್ಯಕ್ತಿಪೂಜೆಗೆ ಮನ್ನಣೆ: ದೇಶ ಮೊದಲು, ಪಕ್ಷದ ನಂತರ, ವ್ಯಕ್ತಿ ಕೊನೆ ಎನ್ನುವುದು ಬಿಜೆಪಿ ಧ್ಯೇಯವಾಗಿದ್ದು, ಈ ಕಾರಣಕ್ಕೆ ಎಲ್ಲ ಪಕ್ಷಗಳಿಗಿಂತ ಭಿನ್ನ, ಶಿಸ್ತಿನ ಪಕ್ಷವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಪಕ್ಷದ ನಾಯಕರು ಆಗಾಗ್ಗೆ ಹೇಳಿಕೊಳ್ಳುತ್ತಾರೆ. ಆದರೆ ವಿಧಾನ ಪರಿಷತ್​ನ ನಾಲ್ಕು ಸ್ಥಾನಗಳಿಗೆ ಉಮೇದುವಾರರ ಆಯ್ಕೆ ನಡೆಸಿದ ಸರ್ಕಸ್, ಬೆಳಗ್ಗೆ ತನಕ ಎಳೆದ ಪರಿಯು ಶಿಸ್ತಿನ ಪಕ್ಷಕ್ಕೆ ಅಪವಾದವಾಯಿತು. ವಿಜಯೇಂದ್ರ ಅವರಿಗೆ ಟಿಕೆಟ್ ನಿರಾಕರಿಸುವ ಮೂಲಕ ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ ಎಂಬ ಸಂದೇಶ ಸಾರಲು ಪಕ್ಷದ ವರಿಷ್ಠರು ಪ್ರಯತ್ನಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಸಂಘಟನೆಗಿಂತ ವ್ಯಕ್ತಿಪೂಜೆಗೆ ಮನ್ನಣೆ ನೀಡಿರುವುದಕ್ಕೆ ಅಭ್ಯರ್ಥಿಗಳ ಪಟ್ಟಿಯೇ ಪುಷ್ಠಿ ನೀಡುತ್ತಿದ್ದು, ಒಂದಿಲ್ಲೊಂದು ಕಾರಣಕ್ಕೆ ಸಂತೋಷ್​ಗೆ ನಿಷ್ಠರಾದವರಿಗೆ ಅದೃಷ್ಟ ಖುಲಾಯಿಸಿದೆ. ನ್ಯಾಯಾಂಗ ಇಲಾಖೆ ನೌಕರಿ ತೊರೆದ ಕೇಶವ ಪ್ರಸಾದ್, ಸಂಘದ ಕಾರ್ಯಕರ್ತ ನಂತರ ಪಕ್ಷದ ಕಚೇರಿ ಕಾರ್ಯದರ್ಶಿ ಮತ್ತು ಕಳೆದ ಕೆಲವು ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿದ್ದಾರೆ. ಆಕಾಂಕ್ಷಿಗಳ ಪೈಕಿ ಸಂಘ ಮತ್ತು ಪಕ್ಷ ನಿಷ್ಠೆ, ಸೇವಾಹಿರಿತನ ಉಳ್ಳವರ ಸಂಖ್ಯೆ ದೊಡ್ಡದಿತ್ತು. ಕೇಶವ ಪ್ರಸಾದ್ ಅವರಿಗಿಂತ ಸಮರ್ಥರಿದ್ದರೂ ಸಂತೋಷ ಕೃಪೆಗೆ ಪಾತ್ರರಾಗಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.

ಜಾತಿ-ವರ್ಗ ಪ್ರಾತಿನಿಧ್ಯ, ಪ್ರಾದೇಶಿಕ ಸಮತೋಲನ: ಛಲವಾದಿ ನಾರಾಯಣಸ್ವಾಮಿ (ಪರಿಶಿಷ್ಟ ಜಾತಿ ಬಲ), ಲಕ್ಷ್ಮಣ ಸವದಿ (ಲಿಂಗಾಯತ ಗಾಣಿಗ), ಕೇಶವ ಪ್ರಸಾದ್ (ನೇಕಾರ- ಇತರ ಹಿಂದುಳಿದ ವರ್ಗ) ಹಾಗೂ ಹೇಮಲತಾ ನಾಯಕ್ (ಪರಿಶಿಷ್ಟ ಪಂಗಡ) ವಿವರವನ್ನು ಬಿಜೆಪಿ ಒಪ್ಪಿಸಿ, ಜಾತಿ-ವರ್ಗಗಳಿಗೆ ಪ್ರಾತಿನಿಧ್ಯಕ್ಕೆ ನೀಡಲಾಗಿದೆ. ಅಲ್ಲದೆ, ಬೆಂಗಳೂರಿನ ಇಬ್ಬರು, ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ತಲಾ ಒಬ್ಬರನ್ನು ಗುರುತಿಸಿ ಪ್ರಾದೇಶಿಕ ಸಮತೋಲನಕ್ಕೆ ಒತ್ತು ನೀಡಿರುವುದಾಗಿ ಬಿಂಬಿಸಿಕೊಂಡಿದೆ.

ಎಲ್ಲ ಸಮುದಾಯಗಳು, ಸೇವೆ ಹಾಗೂ ನಿಷ್ಠಾವಂತರನ್ನು ಪಕ್ಷ ಗುರುತಿಸುವ ಜತೆಗೆ ಅವಕಾಶವನ್ನೂ ನೀಡುತ್ತದೆ. ಪಕ್ಷ ನೀಡಿದ ಜವಾಬ್ದಾರಿಯನ್ನು ವಿಧಾನ ಪರಿಷತ್​ನಲ್ಲಿ ಸಮರ್ಥವಾಗಿ ನಿಭಾಯಿಸುವೆ. | ಛಲವಾದಿ ನಾರಾಯಣಸ್ವಾಮಿ ಬಿಜೆಪಿ ಅಭ್ಯರ್ಥಿ ಟಿಕೆಟ್​ಗಾಗಿ ಯಾವುದೇ ಲಾಬಿ ಮಾಡಿಲ್ಲ. ಪಕ್ಷದ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದನ್ನು ಗುರುತಿಸಿದ್ದಾರೆ. ವಾಲ್ಮೀಕಿ ಸಮುದಾಯದ ಮಹಿಳೆಯನ್ನು ಪಕ್ಷ ಪರಿಗಣಿಸಿ ಅವಕಾಶ ಕಲ್ಪಿಸಿದೆ. | ಹೇಮಲತಾ ನಾಯಕ್ ಬಿಜೆಪಿ ಅಭ್ಯರ್ಥಿ ವರಿಷ್ಠರು ಏನು ಯೋಚನೆ ಮಾಡಿದ್ದಾರೋ ಗೊತ್ತಿಲ್ಲ. ಬಿಜೆಪಿಯಲ್ಲಿ ಮಾತ್ರ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಲಾಗುತ್ತದೆ. ಸಮಸ್ತ ಕಾರ್ಯಕರ್ತರಿಗೆ ಸಂದ ಗೌರವವಾಗಿದೆ. | ಕೇಶವ ಪ್ರಸಾದ್ ಬಿಜೆಪಿ ಅಭ್ಯರ್ಥಿ

ಬಿಎಸ್​ವೈ ಜತೆ ನಡ್ಡಾ ಮಾತುಕತೆ

ವಿಜಯೇಂದ್ರ ಹೆಸರು ಕೈಬಿಡುವ ತೀರ್ವನಕ್ಕೆ ಮಾಜಿ ಸಿಎಂ ಬಿಎಸ್​ವೈಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಮಂಗಳವಾರ ಬೆಳಗ್ಗೆ ಸಂರ್ಪಸಿ ರ್ಚಚಿಸಿದ್ದಾರೆ. ಅಮಿತ್ ಷಾ ಸೂಚನೆಯಂತೆ ಮಾತನಾಡು ತ್ತಿರುವೆ. ವಿಜಯೇಂದ್ರರಿಗೆ ಮಾಸ್ ಲೀಡರ್ ಆಗಿ ಬೆಳೆಯಲು ಅವಕಾಶಗಳಿವೆ. ಹಿಂಬಾಗಿಲ ಬದಲಿಗೆ ನೇರ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದರೆ ವೈಯಕ್ತಿಕ ಸಾಮರ್ಥ್ಯ, ಪಕ್ಷದ ವರ್ಚಸ್ಸು ಹೆಚ್ಚಲಿದೆ. ಮುಂಬರುವ ಚುನಾವಣೆ ಯಲ್ಲಿ ತುಮಕೂರು ಜಿಲ್ಲೆ ಅಥವಾ ವರುಣಾ ವಿಧಾನಸಭೆ ಕ್ಷೇತ್ರಕ್ಕೆ ಸ್ಪರ್ಧೆಗೆ ಪಕ್ಷ ಅವಕಾಶ ನೀಡಲಿದೆ. ತನ್ನೊಂದಿಗೆ ಹಲವರನ್ನು ಗೆಲ್ಲಿಸಿಕೊಂಡು ತರಬಲ್ಲ ತಾಕತ್ತು ಅವರಲ್ಲಿದ್ದು, ಪಕ್ಷಕ್ಕೂ ಪ್ರಯೋಜನವಾಗಲಿದೆ ಎಂದು ನಡ್ಡಾ ಮನವೊಲಿ ಸಿದರು ಎಂದು ಮೂಲಗಳು ತಿಳಿಸಿವೆ.

ಬಿಎಸ್​ವೈ ಭಾವನೆಗೆ ಧಕ್ಕೆ ತರುವುದು ಬೇಡ

ಭಾವೋದ್ವೇಗಕ್ಕೆ ಒಳಗಾಗಿ ಟೀಕೆ-ಟಿಪ್ಪಣಿ ಮೂಲಕ ಪಕ್ಷದ ವರ್ಚಸ್ಸು ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಭಾವನೆಗಳಿಗೆ ಧಕ್ಕೆ ತರುವುದು ಬೇಡವೆಂದು ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳಿಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮನವಿ ಮಾಡಿದ್ದಾರೆ.

ವಿಧಾನಸಭೆಯಿಂದ ವಿಧಾನ ಪರಿಷತ್​ಗೆ ನಡೆಯಲಿರುವ ಚುನಾವಣೆಗೆ ವಿಜಯೇಂದ್ರ ಹೆಸರು ಪರಿಗಣಿಸದಿರುವುದಕ್ಕೆ ಬೆಂಬಲಿಗರು ಸಿಟ್ಟಿಗೆದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶದ ಸಂದೇಶ ಹಂಚಿಕೊಳ್ಳಲಾರಂಭಿಸಿದ್ದರು. ತಕ್ಷಣವೇ ಎಚ್ಚೆತ್ತ ಬಿ.ವೈ.ವಿಜಯೇಂದ್ರ ಟ್ವೀಟ್ ಮುಖೇನ ಲಿಖಿತ ಮನವಿಯೊಂದನ್ನು ಹಂಚಿಕೊಂಡಿದ್ದಾರೆ. ಸಂಘದ ಶಿಸ್ತು, ಜನಪರ ಹೋರಾಟ, ಪಕ್ಷದ ಸಂಘಟನೆ, ನಿಷ್ಠೆಯಿಂದ ಸೇವೆ ಸಲ್ಲಿಸಿದ್ದ ಫಲವಾಗಿ ನಮ್ಮ ತಂದೆ (ಬಿಎಸ್​ವೈ) ನಾಲ್ಕು ಬಾರಿ ಮುಖ್ಯಮಂತ್ರಿಯಾಗಲು ಜನಾಶೀರ್ವಾದ ಹಾಗೂ ಬಿಜೆಪಿ ಕಾರಣವಾಗಿದೆ.

ಜನರ ಸೇವೆಯೇ ರಾಜಕಾರಣದ ಮುಖ್ಯ ಉದ್ದೇಶವಾಗಿದ್ದು, ಅಧಿಕಾರ ಮತ್ತು ಸ್ಥಾನಮಾನವೊಂದೇ ಅಲ್ಲ. ಅನಿರೀಕ್ಷಿತವಾಗಿ ರಾಜಕೀಯ ರಂಗ ಪ್ರವೇಶಿಸಿದ ನನಗೆ ಪಕ್ಷ ಮಹತ್ವದ ಜವಾಬ್ದಾರಿ ನೀಡಿ ಉತ್ತೇಜಿಸಿದ್ದು, ವರಿಷ್ಠರು ಬೆಳೆಸುತ್ತಿದ್ದಾರೆ. ಸಾಮರ್ಥ್ಯ ಇರುವವರನ್ನು ಪಕ್ಷ ಗುರುತಿಸಿ ಅವಕಾಶ ನೀಡುತ್ತದೆ. ಸಮರ್ಥರನ್ನು ಪಕ್ಷ ಎಂದಿಗೂ ಕೈಬಿಟ್ಟಿಲ್ಲ, ಬಿಡುವುದೂ ಇಲ್ಲ. ನೈಜ ಹಿತೈಷಿಗಳು ಇದನ್ನು ಅರ್ಥ ಮಾಡಿಕೊಳ್ಳಬಲ್ಲರು. ಹಾಗೆಯೇ ಪಕ್ಷದ ತೆಗೆದುಕೊಂಡ ತೀರ್ವನಕ್ಕೆ ಬದ್ಧರಾಗಿದ್ದು, ಶಿಸ್ತು ಹಾಗೂ ತಾಳ್ಮೆ ಎಲ್ಲೆ ಮೀರಬಾರದು ಎಂದು ವಿಜಯೇಂದ್ರ ಕೋರಿದ್ದಾರೆ.

ಕೋರ್ ಕಮಿಟಿಗೆ ಬೆಲೆ ಏನು?; ಅಭ್ಯರ್ಥಿ ಆಯ್ಕೆ ಬಗ್ಗೆ ಬಿಜೆಪಿಯಲ್ಲಿ ಅಸಮಾಧಾನ

ಬೆಂಗಳೂರು: ಮೇಲ್ಮನೆ ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿ ಕೋರ್ ಕಮಿಟಿ ಸಭೆಯ ತೀರ್ವನಗಳಿಗೆ ಬೆಲೆ ಇಲ್ಲವೇ? ಬಿಜೆಪಿಯಲ್ಲಿ ಕೇಳಿ ಬರುತ್ತಿರುವ ಅಸಮಾಧಾನ ಇದು. ಇದೇ ಪರಿಸ್ಥಿತಿ ಮುಂದುವರೆದರೆ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುವುದಾದರೂ ಹೇಗೆ ಎಂಬ ಪ್ರಶ್ನೆ ಸಮಿತಿಯ ಸದಸ್ಯರಲ್ಲಿ ಮೂಡಿದೆ.

ಕೋರ್ ಕಮಿಟಿ ಶಿಫಾರಸು ಮಾಡದಿರುವ ಇಬ್ಬರಿಗೆ ಟಿಕೆಟ್ ಸಿಕ್ಕಿದೆ. ವಲಸಿಗರಿಗೆ ಮಣೆ ಹಾಕಲಾಗಿದೆ. ಕೋರ್ ಕಮಿಟಿಗೆ ಈ ರೀತಿಯ ಅಪಮಾನ ಇದೇ ಮೊದಲೇನು ಅಲ್ಲ, ಹಿಂದೆ ಎರಡು ಬಾರಿ ಇದೇ ರೀತಿಯ ಅನುಭವ ಆಗಿದೆ ಎಂದು ಕೋರ್ ಕಮಿಟಿಯ ಸದಸ್ಯರೇ ಕಿಡಿಕಾರುತ್ತಿದ್ದಾರೆ.

ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಪ್ರತಿಬಾರಿ ಕೋರ್ ಕಮಿಟಿ ಶಿಫಾರಸು ಮಾಡಿದ್ದವರನ್ನು ಬಿಟ್ಟು ಬೇರೆಯವರು ಆಯ್ಕೆಯಾಗುವಂತೆ ನೋಡಿಕೊಳ್ಳುವುದು ಹಾಗೂ ಸಂಘಟನೆಯ ಟ್ಯಾಗ್ ಮಾಡುವ ಪರಿಪಾಠ ಬೆಳೆದು ಬಂದಿದೆ. ಪಕ್ಷದ ಮೇಲೆ ಹಿಡಿತ ಸಾಧಿಸುತ್ತಿರುವ ವ್ಯಕ್ತಿ ಪ್ರತಿ ಸಂದರ್ಭದಲ್ಲಿ ತನ್ನ ಆಪ್ತ ವಲಯಕ್ಕೆ ಸೇರಿದವರೆ ಆಯ್ಕೆಯಾಗುವಂತೆ ನೋಡಿಕೊಳ್ಳುತ್ತಿರುವುದು ರಾಜ್ಯದಲ್ಲಿ ಪಕ್ಷ ಬೆಳೆಸಿದವರ ಸಿಟ್ಟಿಗೆ ಕಾರಣವಾಗಿದೆ. ಯಾವುದೇ ವ್ಯಕ್ತಿಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಅವರು ಪ್ರದೇಶ ಹಾಗೂ ಜಾತಿಯ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತಾರೆ ಹಾಗೂ ಅದರಿಂದ ಪಕ್ಷಕ್ಕೆ ಎಷ್ಟು ಅನುಕೂಲವಾಗುತ್ತದೆ ಎಂಬುದನ್ನು ನೋಡಬೇಕಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಆ ರೀತಿ ಆಗುತ್ತಿಲ್ಲವೆಂಬುದು ಬಿಜೆಪಿಯಲ್ಲಿ ಕೇಳಿ ಬರುತ್ತಿರುವ ಅಭಿಪ್ರಾಯವಾಗಿದೆ.

ಹೆಚ್ಚಿನ ಹೆಸರು ಕೇಳಿದ್ದೇ ತಪ್ಪು: ನಾಲ್ಕು ಸ್ಥಾನಗಳಿಗೆ ಐದು ವಿಭಾಗದಲ್ಲಿ ತಲಾ ಐದು ಹೆಸರಿನಂತೆ 25 ಹೆಸರು ಶಿಫಾರಸು ಮಾಡಲು ಹೈಕಮಾಂಡ್ ಸೂಚನೆ ನೀಡಿತ್ತು. ಇಷ್ಟೊಂದು ಹೆಸರು ಶಿಫಾರಸು ಮಾಡುವಂತೆ ಕೇಳಿದ್ದು ಮೊದಲನೇ ತಪು್ಪ, ಅದರಲ್ಲಿಯೂ ಪರಿಗಣಿಸದೇ ವ್ಯಕ್ತಿಯೊಬ್ಬರ ತಾಳಕ್ಕೆ ವರಿಷ್ಠರು ಕುಣಿದಿರುವುದು ಮತ್ತೊಂದು ತಪು್ಪ ಎಂದು ಕೋರ್ ಕಮಿಟಿಯ ಸದಸ್ಯರು ಹೇಳುತ್ತಾರೆ. ಕೊನೆ ಗಳಿಗೆಯ ತನಕ ಹೆಸರು ಬಿಟ್ಟುಕೊಡದೇ ತನ್ನ ಆಪ್ತರಿಗೆ ಅವಕಾಶ ಸಿಕ್ಕುವಂತೆ ಮಾಡುವ ಚಾಣಾಕ್ಷ ನಡೆಯನ್ನು ಅನುಸರಿಸಲಾಗುತ್ತದೆ ಎಂದು ಹೇಳುವ ಕೋರ್ ಕಮಿಟಿಯ ಸದಸ್ಯರು, ಹಿಂದೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕೊನೆಯ ತನಕ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ಸಿಕ್ಕುವುದಿಲ್ಲವೆಂಬ ಮಾಹಿತಿಯೇ ಹೊರ ಬರದಂತೆ ನೋಡಿಕೊಂಡಿದ್ದನ್ನು ಉದಾ ಹರಣೆಯಾಗಿ ನೀಡುತ್ತಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ಚುನಾವಣೆಗಳಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ. ಅದಕ್ಕೆ ಮೊದಲು ಹೈಕಮಾಂಡ್ ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದು ಹೇಳಿದ್ದಾರೆ.

ನಾನು ಅಭ್ಯರ್ಥಿ ಒಳಗೆ ಬಿಡಿ: ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿ ಕಚೇರಿ ಆಗಮಿಸಿದ ಸಂದರ್ಭದಲ್ಲಿ ಕೇಶವ ಪ್ರಸಾದ್ ಅವರನ್ನು ಗಮನಿಸದ ಸಿಬ್ಬಂದಿ ಬಾಗಿಲಿಗೆ ಕೈ ಅಡ್ಡ ಹಿಡಿದಿದ್ದರು. ಈ ವೇಳೆ ಕೇಶವ ಪ್ರಸಾದ್, ನಾನು ಅಭ್ಯರ್ಥಿ, ಒಳಗೆ ಹೋಗಬೇಕು ಎಂದು ಕೋರಿ ಕೊಂಡ ಪ್ರಸಂಗ ನಡೆಯಿತು. ಅವರ ಮಾತು ಕೇಳಿದ ಸಿಬ್ಬಂದಿ, ಒಹೋ ಎಂದು ಉದ್ಘಾರ ತೆಗೆದು ನಗುತ್ತಾ ಒಳಗೆ ಬಿಟ್ಟರು.