ನ್ಯೂಸ್

ಔರಂಗಜೇಬ್​ ಕುರಿತ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದೆ ಆದರೂ..; ಎಸ್​ಪಿ ಶಾಸಕ ಅಬು ಅಜ್ಮಿ ಹೇಳಿದ್ದೇನು? | Abu Azmi

ಮುಂಬೈ: ಮೊಘಲ್ ಚಕ್ರವರ್ತಿ ಔರಂಗಜೇಬನನ್ನು ಹೊಗಳಿದ್ದ ಸಮಾಜವಾದಿ ಪಕ್ಷದ (ಎಸ್‌ಪಿ) ಶಾಸಕ ಅಬು ಅಸಿಮ್ ಅಜ್ಮಿ(Abu Azmi) ಅವರು ತನ್ನ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದರೂ ನನ್ನ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ನನ್ನನ್ನು ಮಹಾರಾಷ್ಟ್ರ ವಿಧಾನಸಭೆಯಿಂದ ಅಮಾನತು ಮಾಡಲಾಗಿದೆ ಎಂದು ಬುಧವಾರ(ಮಾರ್ಚ್​​ 5) ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.

ಔರಂಗಜೇಬನ ಬಗ್ಗೆ ನಾನು ಹೇಳಿದ್ದೆಲ್ಲವೂ ಇತಿಹಾಸಕಾರರು ಮತ್ತು ಬರಹಗಾರರು ಹೇಳಿರುವ ವಿಷಯ. ಶಿವಾಜಿ ಮಹಾರಾಜ, ಸಂಭಾಜಿ ಮಹಾರಾಜ ಅಥವಾ ಯಾವುದೇ ರಾಷ್ಟ್ರೀಯ ಐಕಾನ್‌ಗಳ ವಿರುದ್ಧ ನಾನು ಯಾವುದೇ ಅವಹೇಳನಕಾರಿ ಹೇಳಿಕೆಗಳನ್ನು ನೀಡಿಲ್ಲ. ಆದರೂ ನನ್ನ ಹೇಳಿಕೆಗಳಿಂದ ಯಾರಿಗಾದರೂ ನೋವಾಗಿದ್ದರೆ, ನಾನು ನನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆಯುತ್ತೇನೆ ಎಂದು ಹೇಳಿದ್ದಾರೆ.

ತನ್ನ ಕಚೇರಿಯಿಂದ ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಅಸಿಮ್​​ ಅಜ್ಮಿ ಅವರು ಯಾವುದೇ ತಪ್ಪು ಹೇಳಿಕೆಯನ್ನು ಹೇಳಿಲ್ಲ ಎಂದು ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ಸದನದ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಸದನದ ಹೊರಗೆ ಮಾಡಿದ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದೇನೆ. ಆದರೂ ನನ್ನನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ 2025ರ ಮಹಾರಾಷ್ಟ್ರ ಬಜೆಟ್ ಅಧಿವೇಶನದ ಅಂತ್ಯದವರೆಗೆ ಅಜ್ಮಿ ಅವರನ್ನು ಸದನದಿಂದ ಅಮಾನತುಗೊಳಿಸುವ ನಿರ್ಣಯವನ್ನು ರಾಜ್ಯ ವಿಧಾನಸಭೆಯು ಧ್ವನಿ ಮತದ ಮೂಲಕ ಸರ್ವಾನುಮತದಿಂದ ಅಂಗೀಕರಿಸಿತು. ಔರಂಗಜೇಬನನ್ನು ಶ್ಲಾಘಿಸುವ ಅಜ್ಮಿ ಅವರ ಹೇಳಿಕೆಯು ಮರಾಠ ರಾಜ ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಅವರ ಪುತ್ರ ಛತ್ರಪತಿ ಸಂಭಾಜಿ ಮಹಾರಾಜರಿಗೆ ಅವಮಾನವಾಗಿದೆ ಎಂದು ಸದಸ್ಯರು ಹೇಳಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯ 2025ರ ಬಜೆಟ್ ಅಧಿವೇಶನವು ಮಾರ್ಚ್ 26ರಂದು ಕೊನೆಗೊಳ್ಳಲಿದೆ.

ಸಮಾಜವಾದಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾದ ಅಜ್ಮಿ, ಔರಂಗಜೇಬನ ಆಳ್ವಿಕೆಯಲ್ಲಿ ಭಾರತದ ಗಡಿ ಅಫ್ಘಾನಿಸ್ತಾನ ಮತ್ತು ಬರ್ಮಾ (ಮ್ಯಾನ್ಮಾರ್) ತಲುಪಿತ್ತು. ಔರಂಗಜೇಬ್ ಮತ್ತು ಮರಾಠಾ ರಾಜ ಛತ್ರಪತಿ ಸಂಭಾಜಿ ಮಹಾರಾಜ್ ನಡುವಿನ ಹೋರಾಟದ ಬಗ್ಗೆ ಕೇಳಿದಾಗ ಅಜ್ಮಿ ಇದನ್ನು ರಾಜಕೀಯ ಯುದ್ಧ ಎಂದು ಹೇಳಿದ್ದರು.(ಏಜೆನ್ಸೀಸ್​​)