ಪಟನಾ: ಫೆ. 14ರಂದು ಬಿಹಾರದ ಸೈವಾನ್ ಜಿಲ್ಲೆಗೆ ಆಸ್ಪತ್ರೆಯ ಶಂಕುಸ್ಥಾಪನೆ ನೇರವೇರಿಸಲು ಆಗಮಿಸಿದ್ದ ಬಿಹಾರದ ಆರೋಗ್ಯ ಮಂತ್ರಿಯನ್ನು ಗುರುತಿಸಲು ವಿಫಲವಾದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡುವಂತೆ ಆರೋಗ್ಯ ಸಚಿವ ಮಂಗಲ್ ಪಾಂಡೆ ಸೂಚಿಸಿದ್ದಾರೆ.
ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಚಿವರ ಗುರುತು ಹಿಡಿಯದ ಜನರನ್ನೇಕೆ ನಿಯೋಜಿಸುತ್ತೀರಾ? ಸಚಿವರನ್ನೇ ನಿಲ್ಲಿಸಲು ಯತ್ನಿಸುತ್ತಾನೆ. ಅವನನ್ನು ಖಂಡಿತವಾಗಿ ಅಮಾನತು ಮಾಡಬೇಕೆಂದು ಸಚಿವ ಮಂಗಲ್ ಪಾಂಡೆ ಮಾತನಾಡುತ್ತಿರುವುದನ್ನು ವೈರಲ್ ವಿಡಿಯೋದಲ್ಲಿ ಕೇಳಬಹುದಾಗಿದೆ.
ಪೊಲೀಸ್ ಅಧಿಕಾರಿಯನ್ನು ಅಸಿಸ್ಟೆಂಟ್ ಪೊಲೀಸ್ ಇನ್ಸ್ಪೆಕ್ಟರ್ ಗಣೇಶ್ ಚೌಹಾಣ್ ಎಂದು ಗುರುತಿಸಲಾಗಿದ್ದು, ಇವರನ್ನು ವಿಐಪಿಗಳು ವೇದಿಕೆಗೆ ತೆರಳಲು ಅನುಕೂಲ ಮಾಡಿಕೊಡಲು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಈ ವೇಳೆ ಆರೋಗ್ಯ ಸಚಿವರನ್ನು ಗುರುತಿಸಲು ವಿಫಲವಾದ ಪೊಲೀಸ್ ಅಧಿಕಾರಿ, ಸಚಿವರನ್ನು ತಡೆಯಲು ಯತ್ನಿಸಿದರು.
ಸಚಿವರ ವರ್ತನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಹಾರ ಮಾಜಿ ಉಪಮುಖ್ಯಮಂತ್ರಿ ಮತ್ತು ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್, ಸಚಿವರು ತನ್ನ ಅರ್ಹತೆ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವುದನ್ನು ಕಂಡು ನನಗೆ ಶಾಕ್ ಆಯಿತು ಎಂದು ವ್ಯಂಗ್ಯವಾಡಿದ್ದಾರೆ. (ಏಜೆನ್ಸೀಸ್)