ನ್ಯೂಸ್

ಗೃಹಿಣಿಯ ಅನುಮಾನಾಸ್ಪದ ಸಾವು

ಎಚ್.ಡಿ.ಕೋಟೆ: ಪಟ್ಟಣದ ವಿಶ್ವನಾಥ ಕಾಲನಿಯ ವಠಾರದಲ್ಲಿ ಶನಿವಾರ ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.

ತಾಲೂಕಿನ ಹೆಗ್ಗಡಪುರ ಗ್ರಾಮದ ಸಿದ್ದಪ್ಪಾಜಿ ಎಂಬುವರ ಪತ್ನಿ ಸಣ್ಣದೇವಮ್ಮ (40)ಮೃತ ಮಹಿಳೆ. ಮೃತ ಸಣ್ಣದೇವಮ್ಮಳ ತಾಯಿ ಪೊಲೀಸರಿಗೆ ದೂರು ನೀಡಿ ಈಕೆಯ ಪತಿ ಸಿದ್ದಪ್ಪಾಜಿ ನನ್ನ ಮಗಳನ್ನು ಕೊಲೆ ಮಾಡಿರಬಹುದು ಎಂದು ಆರೋಪಿಸಿದ್ದಾರೆ.

ಮೃತ ಸಣ್ಣದೇವಮ್ಮ ಮೂಲತಃ ಹೆಗ್ಗಡಪುರ ಗ್ರಾಮದ ವಾಸಿಯಾಗಿದ್ದು ಅದೇ ಗ್ರಾಮದ ಸಣ್ಣಯ್ಯ ಎಂಬುವರ ಜತೆ ಮದುವೆಯಾಗಿದ್ದು, ಕೆಲ ವರ್ಷಗಳ ನಂತರ ಆತ ಮೃತಪಟ್ಟಿದ್ದ. ಇವರಿಗೆ ಎರಡು ಗಂಡು ಮಕ್ಕಳು ಇದ್ದಾರೆ.
ನಂತರ ಸಿದ್ದಪ್ಪಾಜಿ ಜತೆ ಸ್ನೇಹ ಬೆಳೆಸಿದ ಸಣ್ಣದೇವಮ್ಮ ಆತನ ಜತೆಯೇ ಇದ್ದಳು. ನಂತರ ಎಚ್.ಡಿ.ಕೋಟೆ ಪಟ್ಟಣದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು.

ಶನಿವಾರ ಬೆಳಗ್ಗೆ 4 ಗಂಟೆಯಲ್ಲಿ ನನ್ನ ಹೆಂಡತಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ ಎಂದು ಅಕ್ಕಪಕ್ಕದ ಮನೆಯವರಿಗೆ ಹಾಗೂ ಹೆಗ್ಗಡಪುರ ಗ್ರಾಮಸ್ಥರಿಗೆ ತಿಳಿಸಿದ್ದಾನೆ.

ಈತನ ಮೇಲೆ ಅನುಮಾನಗೊಂಡು ಸಣ್ಣದೇವಮ್ಮಳ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಎಚ್.ಡಿ.ಕೋಟೆ ಪಟ್ಟಣ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.