ಮುಂಬೈ: ಮಾಜಿ ವಿಶ್ವ ಸುಂದರಿ ಮತ್ತು ನಟಿ ಸುಶ್ಮಿತಾ ಸೇನ್ ಅವರು ತಮ್ಮ ವೃತ್ತಿಜೀವನದಿಂದ ಮಾತ್ರವಲ್ಲ ವೈಯಕ್ತಿಕ ಜೀವನದಿಂದಲೂ ಸಾಕಷ್ಟು ಸುದ್ದಿಯಲ್ಲಿರುತ್ತಾರೆ. ನಟಿ ತನ್ನ ಮಾಜಿ ಗೆಳೆಯ ರೋಹ್ಮನ್ ಶಾಲ್ ಜತೆ ಪ್ಯಾಚ್ಅಪ್ ಮಾಡಿಕೊಂಡಿದ್ದಾರೆ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿತ್ತು. ಸದ್ಯ ನಟಿ ಸುಶ್ಮಿತಾ, ತಾನು ಯಾರೊಂದಿಗೂ ಡೇಟಿಂಗ್ ಮಾಡುತ್ತಿಲ್ಲ ಎಂದು ಹೇಳುವ ಮೂಲಕ ಪ್ಯಾಚ್ಅಪ್ ವಿಚಾರಕ್ಕೆ ತೆರೆಎಳೆದಿದ್ದಾರೆ.
ಇದನ್ನು ಓದಿ: ಕಾಂಟ್ಯಾಕ್ಟ್ ಲೆನ್ಸ್ನಿಂದ ಕಾರ್ನಿಯಾಗೆ ಡ್ಯಾಮೇಜ್; ಕಣ್ಣಿನ ಸ್ಥಿತಿ ಬಗ್ಗೆ ನಟಿ ಹೇಳಿಕೊಂಡಿದ್ದು ಹೀಗೆ…
ಯಾವಾಗಲೂ ಮುಕ್ತವಾಗಿ ಮಾತನಾಡುವ ಪ್ರತಿಭಾವಂತ ನಟಿ ಸುಶ್ಮಿತಾ ಇತ್ತೀಚೆಗೆ ನೀಡಿದ ಖಾಸಗಿ ವಾಹಿನಿಯ ಸಂದರ್ಶವೊಂದರಲ್ಲಿ ಕಳೆದ ಮೂರು ವರ್ಷಗಳಿಂದ ಒಂಟಿಯಾಗಿದ್ದೇನೆ. ತಾನು ಯಾರೊಂದಿಗೂ ಡೇಟಿಂಗ್ ಮಾಡುತ್ತಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ನನಗೆ ಉತ್ತಮ ಸ್ನೇಹಿತರಿದ್ದಾರೆ. ಆದರೆ ಸದ್ಯಕ್ಕೆ ಯಾರೊಂದಿಗೂ ಡೇಟಿಂಗ್ ಮಾಡುತ್ತಿಲ್ಲ. ನನ್ನ ಜೀವನದಲ್ಲಿ ಯಾವುದೇ ವ್ಯಕ್ತಿ ಇಲ್ಲ. ನಾನು ಸ್ವಲ್ಪ ಸಮಯದಿಂದ ಒಬ್ಬಂಟಿಯಾಗಿದ್ದೇನೆ. ನಿಖರವಾಗಿ ಹೇಳಬೇಕೆಂದರೆ ಮೂರು ವರ್ಷಗಳಿಂದ ನಾನು ಒಬ್ಬಂಟಿಯಾಗಿದ್ದೇನೆ. 2021 ರಿಂದ... ನಾನು ಸಂಬಂಧದಲ್ಲಿಲ್ಲ. ನನ್ನ ಜೀವನದಲ್ಲಿ ನಂಬಲಾಗದಷ್ಟು ಅದ್ಭುತವಾದ ವ್ಯಕ್ತಿಗಳು ನನ್ನ ಸ್ನೇಹಿತರಾಗಿದ್ದಾರೆ. ಅವರೆಲ್ಲರೂ ನಾನು ಅವರಿಗೆ ಕರೆ ಮಾಡುವ ಕ್ಷಣಕ್ಕಾಗಿ ಕಾಯುತ್ತಿರುತ್ತಾರೆ ಎಂದು ಹೇಳಿದ್ದಾರೆ.
ಅಲ್ಲದೆ ಡೇಟಿಂಗ್ನಿಂದ ವಿರಾಮ ತೆಗೆದುಕೊಂಡಿರುವುದು ಮತ್ತು ಏಕಾಂಗಿ ಜೀವನವನ್ನು ಆನಂದಿಸುತ್ತಿರುವುದಾಗಿ ಸುಶ್ಮಿತಾ ಸೇನ್ ಹೇಳಿದ್ದಾರೆ. ಸದ್ಯ ನನಗೆ ಯಾರ ಬಗ್ಗೆಯೂ ಆಸಕ್ತಿ ಇಲ್ಲ. ನಾನು ಸುಮಾರು ಐದು ವರ್ಷಗಳ ಕಾಲ ಸಂಬಂಧವನ್ನು ಹೊಂದಿದ್ದರಿಂದ ಈಗ ವಿರಾಮ ತೆಗೆದುಕೊಂಡಿರುವುದು ಒಳ್ಳೆಯದೇ ಎಂದು ಹೇಳಿದ್ದಾರೆ. ಸುಶ್ಮಿತಾ ಸೇನ್ ಮತ್ತು ಮಾಡೆಲ್ ರೋಹ್ಮನ್ ಶಾಲ್ ದೀರ್ಘಕಾಲ ಡೇಟಿಂಗ್ ಮಾಡುತ್ತಿದ್ದರು. 15 ವರ್ಷಗಳ ವಯಸ್ಸಿನ ಅಂತರವಿದ್ದರೂ, ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಈ ಜೋಡಿ 2021ರಲ್ಲಿ ದೂರಾದರು.
ಇದರ ನಂತರ ಸುಶ್ಮಿತಾ ಉದ್ಯಮಿ ಲಲಿತ್ ಮೋದಿಯವರೊಂದಿಗೆ ಡೇಟಿಂಗ್ ಮಾಡಿದ್ದಾರೆ ಎಂಬ ಮಾತು ಕೇಳಿಬಂತು. ಮತ್ತೊಂದೆಡೆ ಸುಶ್ಮಿತಾ ಜೀವನದಲ್ಲಿ ರೋಹ್ಮನ್ ಇನ್ನೂ ಇದ್ದಾರೆ ಎಂಬ ಮಾತುಗಳು ಕೇಳಿಬಂದವು. ಸದ್ಯ ಎಲ್ಲಾ ಊಹಾಪೋಹಗಳಿಗೆ ನಟಿ ನಾನು ಪ್ರಸ್ತುತ ಸಿಂಗಲ್ ಎಂದು ಹೇಳುವ ಮೂಲಕ ಫುಲ್ಸ್ಟಾಪ್ ಇಟ್ಟಿದ್ದಾರೆ. (ಏಜೆನ್ಸೀಸ್)