ನ್ಯೂಸ್

250 ರೂ. ಸಂಬಳ ಪಡೆಯುತ್ತಿದ್ದ ಸುಶಾಂತ್​, ಚಂದ್ರನಲ್ಲಿ ಜಾಗ ಖರೀದಿಸಿದ್ದ!

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್ ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಡೀ ಭಾರತೀಯ ಚಿತ್ರರಂಗ ಯುವ ನಟನ ಸಾವಿಗೆ ಕಂಬನಿ ಮಿಡಿಯುತ್ತಿದೆ. ಅದರ ಜತೆಗೆ ಆತ್ಮಹತ್ಯೆ ಮಾಡಿಕೊಳ್ಳುವಂಥ ಕೆಟ್ಟ ನಿರ್ಧಾರ ಮಾಡಿದ್ದಾದರೂ ಯಾಕೆ ಎಂದೂ ಪ್ರಶ್ನಿಸುತ್ತಿದ್ದಾರೆ. ನಾಯಕನ ಪಟ್ಟ, ಹಣ, ಪ್ರೀತಿಸುವ ಅಭಿಮಾನಿಗಳು, ಮುದ್ದಾದ ಕುಟುಂಬ ಇಷ್ಟೆಲ್ಲ ಇದ್ದೂ ಇನ್ನೇನು ಬೇಕಿತ್ತು ಈ ನಟನಿಗೆ ಎನ್ನುತ್ತಿದ್ದಾರೆ. ಯಾವುದೇ ಗಾಡ್​ಫಾದರ್​ ಇಲ್ಲದೆ, ಬಾಲಿವುಡ್​ನಲ್ಲಿ ಗಟ್ಟಿನೆಲೆಯೂರಿದ್ದ ಸುಶಾಂತ್​, ಒಂದು ಕಾಲದಲ್ಲಿ ಹಿನ್ನೆಲೆ ನೃತ್ಯಗಾರನಾಗಿದ್ದ. ನಾಟಕಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ನಿಭಾಯಿಸುತ್ತಿದ್ದ. ಆಗ ಆತನ ಸಂಬಳ ಕೇವಲ 250 ರೂ ಎಂದರೇ ನೀವು ನಂಬಲೇ ಬೇಕು! ಆದರೆ, ಸ್ಟಾರ್ ಪಟ್ಟ ಸಿಕ್ಕ ಮೇಲೆ, ಚಂದ್ರನಲ್ಲಿ ಒಂದಷ್ಟು ಜಾಗ ಪಡೆದು ಸುದ್ದಿಯಾಗಿದ್ದ.

ಹೌದು, ಜೂನ್ 25 2018ರಂದು ಚಂದ್ರನಲ್ಲಿನ ಸಣ್ಣ ಜಾಗವನ್ನು ಪಡೆದುಕೊಂಡಿದ್ದರು. ಆ ಜಾಗಕ್ಕೆ ಮೇರ್ ಮಸ್ಕೊವಿನ್ಸ್ ಅಥವಾ ಸೀ ಆಫ್​ ಮಸ್ಕೊವಿ ಎಂಬ ಹೆಸರೂ ಇದೆ. ಆ ಜಾಗವನ್ನು ನೋಡಲು ವಿಶ್ವದಲ್ಲೇ ಅತ್ಯಂತ ಉತ್ಕ್ರಷ್ಟ ಮಟ್ಟದ ಟೆಲಿಸ್ಕೋಪ್​ ಸಹ ಖರೀದಿಸಿದ್ದರು ಸುಶಾಂತ್​. ಇದಷ್ಟೇ ಅಲ್ಲ 59 ಕೋಟಿ ನಗದು, ಹತ್ತಾರು ಲಕ್ಸುರಿ ಕಾರ್​ಗಳು, ಬಿಎಂಡಬ್ಲೂ ಕಂಪನಿಯ ದುಬಾರಿ ಬೆಲೆಯ ಬೈಕ್​, ಭವ್ಯವಾದ ಪ್ಲಾಟ್​ಗಳನ್ನು ಸುಶಾಂತ್ ಹೊಂದಿದ್ದರು. ಏನಿಲ್ಲ ಅಂದರೂ ಒಂದು ಸಿನಿಮಾಕ್ಕೆ ಐದರಿಂದ ಆರು ಕೋಟಿ ಸಂಭಾವನೆ ಪಡೆಯುತ್ತಿದ್ದ ಸುಶಾಂತ್, ಕಳೆದ ಕೆಲ ವರ್ಷಗಳಿಂದ ಖಿನ್ನತೆಗೆ ಜಾರಿದ್ದರಂತೆ. ಅದರಿಂದ ಹೊರಬಾರದೆ, ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಸುಶಾಂತ್ ಸಿಂಗ್ ರಜಪೂತ್, ಇಂಜಿನಿಯರಿಂಗ್ ಅರ್ಧಕ್ಕೆ ಬಿಟ್ಟು ಬಣ್ಣದ ಕನಸಿನ ಹಿಂದೆ ಬಿದ್ದಿದ್ದರು. ಆರು ಜನರೊಂದಿಗೆ ರೂಮ್ ಶೇರ್ ಮಾಡಿಕೊಂಡು ಮುಂಬೈನಲ್ಲಿ ವಾಸವಾಗಿದ್ದರು. ನಾಟಕ, ನೃತ್ಯದ ಕಡೆ ಒಲವಿದ್ದಿದ್ದಕ್ಕೆ, ಹಿನ್ನೆಲೆ ನೃತ್ಯಗಾರನಾಗಿಯೂ ಕೆಲಸ ಮಾಡಿದ್ದ ಸುಶಾಂತ್, 250 ರೂಪಾಯಿ ಸಂಭಾವನೆ ಪಡೆದಿದ್ದರು. ಬಳಿಕ ಕಿರುತೆರೆ, ರಿಯಾಲಿಟಿ ಶೋಗಳಲ್ಲಿ ಮಿಂಚಿ, ಪ್ರತಿಭಾವಂತ ನಟನಿಗೆ ಬಾಲಿವುಡ್​ ರೆಡ್​ ಕಾರ್ಪೆಟ್​ ಹಾಸಿ ಸ್ವಾಗತಿಸಿತ್ತು. ಆದರೆ, ಅವರು ಇಷ್ಟು ಬೇಗ ಎಲ್ಲವನ್ನು ಬಿಟ್ಟು ತೆರಳುತ್ತಾರೆಂದೂ ಯಾರೂ ಕನಸು ಮನಸಿನಲ್ಲಿ ಅಂದುಕೊಂಡಿರಲಿಲ್ಲ.