ನ್ಯೂಸ್

VIDEO| ಸುಶಾಂತ್​ ಆತ್ಮಹತ್ಯೆ ಪ್ರಕರಣ: ಬಿಹಾರ ಪೊಲೀಸರಿಗೆ ಸಿಕ್ಕ ವಿಡಿಯೋದಲ್ಲಿದೆ ರಿಯಾ ನಿಗೂಢ ಮಾತು!

ಮುಂಬೈ: ನಟ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕು ಪಡೆದಿದ್ದು, ಬಿಹಾರದಲ್ಲಿ ಸುಶಾಂತ್​ ಗೆಳತಿ ರಿಯಾ ಚಕ್ರವರ್ತಿ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಕಾರ್ಯಾಚರಣೆಗೆ ಇಳಿದ ಬಿಹಾರ ಪೊಲೀಸರು ರಿಯಾಗೆ ಸಂಬಂಧಿಸಿದ ದಿನಾಂಕವಿಲ್ಲದ ವಿಡಿಯೋವೊಂದನ್ನು ವಶಕ್ಕೆ ಪಡೆದಿದ್ದಾರೆ. ಇದೀಗ ಆ ವಿಡಿಯೋ ವೈರಲ್​ ಆಗಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಹಫ್ತಾ ವಸೂಲಿ ಹಾಗೂ ಗೂಂಡಾ ಸೇರಿದಂತೆ ಮುಂತಾದ ಪದಗಳನ್ನು ಉಪಯೋಗಿಸಿರುವುದನ್ನು ಕೇಳಬಹುದಾಗಿದೆ. ಅಂದಹಾಗೆ ರಿಯಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ಸುಶಾಂತ್​ ತಂದೆ ಪಟನಾ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದು, ಎಫ್​ಐಆರ್​ ಕೂಡ ದಾಖಲಾಗಿದೆ.

ವಿಡಿಯೋ ಯಾವಾಗ ಚಿತ್ರೀಕರಿಸಲಾಗಿದೆ ಹಾಗೂ ಯಾವ ವಿಚಾರದ ಮೇಲೆ ಸಂಭಾಷಣೆ ನಡೆದಿದೆ ಎಂಬುದರ ಬಗ್ಗೆ ಸ್ಪಷ್ಟನೆ ಇಲ್ಲ. ಆದರೆ, ಕೆಲ ಅಸಂಬದ್ಧ ಪದಗಳನ್ನು ಬಳಸಿರುವುದು ಕಂಡುಬಂದಿದೆ. ವಿಡಿಯೋ ಮೇಲೆ ಬಿಹಾರ ಪೊಲೀಸರು ಮತ್ತಷ್ಟು ತನಿಖೆ ಮುಂದುವರಿಸಿದ್ದಾರೆ.

ಇನ್ನು ಸುಶಾಂತ್​ ತಂದೆ ರಿಯಾ ವಿರುದ್ಧ ಕಳೆದ ಶನಿವಾರ ದೂರು ದಾಖಲಿಸಿದ್ದಾರೆ. ಇದರ ನಡುವೆ ರಿಯಾ ಸಹ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದು, ತನಿಖೆಯನ್ನು ಬಿಹಾರ ಪೊಲೀಸರಿಂದ ಮುಂಬೈ ಪೊಲೀಸರಿಗೆ ವರ್ಗಾಯಿಸಲು ಕೋರಿದ್ದಾರೆ.

ನನಗೆ ಸಾಕಷ್ಟು ಕೊಲೆ ಹಾಗೂ ಅತ್ಯಾಚಾರ ಬೆದರಿಕೆಗಳು ಬರುತ್ತಿವೆ. ಅಲ್ಲದೆ, ಸುಶಾಂತ್​ ಆತ್ಮಹತ್ಯೆಯಿಂದ ನಾನು ತೀವ್ರ ಆಘಾತಕ್ಕೆ ಒಳಗಾಗಿದ್ದೇನೆ. ನಾನು ಮತ್ತು ಸುಶಾಂತ್​ ಲಿವಿಂಗ್​ ರಿಲೇಶನ್​ಶಿಪ್​ನಲ್ಲಿ ಇದ್ದಿದ್ದು ನಿಜ. ಜೂನ್​ 8ರವರೆಗೆ ಮಾತ್ರ ನಮ್ಮ ಸಂಬಂಧ ಇತ್ತು. ಸುಶಾಂತ್​ ಖಿನ್ನತೆಯಿಂದ ಬಳಲುತ್ತಿದ್ದರು. ಅದನ್ನು ಹೋಗಲಾಡಿಸಲು ಔಷಧಗಳನ್ನು ತೆಗೆದುಕೊಳ್ಳುತ್ತಿದ್ದರು. ಇದರಲ್ಲಿ ನನ್ನ ಪಾತ್ರವೇನಿಲ್ಲ. ಈ ಪ್ರಕರಣದಲ್ಲಿ ಅರ್ಜಿದಾರ (ಸುಶಾಂತ್​ ತಂದೆ) ನನ್ನನ್ನು ತಪ್ಪಾಗಿ ಸೂಚಿಸಿದ್ದಾರೆ ಎಂದಿದ್ದಾರೆ. (ಏಜೆನ್ಸೀಸ್​)