ನ್ಯೂಸ್

ಅಪ್ರಾಪ್ತೆ ಜತೆ ಮದುವೆ, ಐದನೇ ವಿವಾಹಕ್ಕೆ ಸಿದ್ಧತೆ... ಸಿಕ್ಕಿಬಿದ್ದ ಖತರ್ನಾಕ್​ ಪೇದೆ, ಪೊಕ್ಸೋ ಕೇಸ್​ ದಾಖಲು! Police Constable

Police Constable : ಏನಾದರೂ ಅನ್ಯಾಯವಾದರೆ ನಮ್ಮ ಮೊದಲ ಹೆಜ್ಜೆ ಪೊಲೀಸ್​ ಠಾಣೆಯ ಕಡೆಗೆ ಇರುತ್ತದೆ. ಪೊಲೀಸರು ನಮಗೆ ನ್ಯಾಯ ಕೊಡುತ್ತಾರೆ ಅನ್ನೋ ನಂಬಿಕೆ ನಮ್ಮಲ್ಲಿ ಇರುತ್ತದೆ. ಆದರೆ, ಅದೇ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಪೊಲೀಸರೇ ವಂಚನೆ ಎಸಗಿರುವ ಸಾಕಷ್ಟು ಉದಾಹರಣೆಗಳು ಕೂಡ ನಮ್ಮ ಕಣ್ಣ ಮುಂದಿವೆ. ಇದಕ್ಕೆ ತಾಜಾ ಉದಾಹರಣೆಯೊಂದು ತೆಲಂಗಾಣದಲ್ಲಿ ವರದಿಯಾಗಿದೆ.

ಇಲ್ಲೊಬ್ಬ ಕಾನ್ಸ್​ಟೆಬಲ್​ ಒಂದಲ್ಲ ಎರಡಲ್ಲ ಬರೋಬ್ಬರಿ ನಾಲ್ಕು ಮದುವೆಯಾಗಿದ್ದು, ಐದನೇ ಬಾರಿ ಮದುವೆಗೆ ಸಿದ್ಧತೆ ಮಾಡಿಕೊಳ್ಳುವಾಗ ಸಿಕ್ಕಿಬಿದ್ದಿದ್ದಾನೆ. ಆರೋಪಿ ಪೇದೆಯನ್ನು ಕೃಷ್ಣ ರಾಜು ಎಂದು ಗುರುತಿಸಲಾಗಿದೆ. ಈತ ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯ ನಾಡಿಗುಡೆಮ್​ ಪೊಲೀಸ್ ಸ್ಟೇಷನ್‌ನಲ್ಲಿ ಕಾನ್‌ಸ್ಟೇಬಲ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ. ಆತನ ವಿರುದ್ಧ ಪೊಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಆರೋಪಿ ಕೃಷ್ಣರಾಜು ಒಟ್ಟು ನಾಲ್ಕು ಬಾರಿ ವಿವಾಹವಾಗಿದ್ದು, ಈ ಪೈಕಿ ನಾಲ್ಕನೇ ವಿವಾಹವನ್ನು 2023ರಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ ಅಪ್ರಾಪ್ತ ಬಾಲಕಿಯೊಂದಿಗೆ ಮಾಡಿಕೊಂಡಿದ್ದ. ಈ ಕಾರಣಕ್ಕಾಗಿ ಪೊಲೀಸ್ ಅಧಿಕಾರಿಗಳು ಕೃಷ್ಣರಾಜುವನ್ನು ಸಸ್ಪೆಂಡ್ ಮಾಡಿದ್ದಾರೆ ಮತ್ತು POCSO ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ.

ಈ ಪ್ರಕರಣ ಕುರಿತು ನಾಡಿಗುಡೆಮ್​ ಠಾಣೆಯ ಎಸ್‌ಐ ಬಾಲುನಾಯಕ್ ಮಾಹಿತಿ ನೀಡಿದ್ದು, ಚಿವ್ವೆನ್ಲಾ ಮಂಡಲದ ತುಲ್ಜರಾವ್‌ಪೇಟೆ ಗ್ರಾಮ ಪಂಚಾಯತಿಯ ನಿವಾಸಿ ಕೃಷ್ಣರಾಜು ನಾಡಿಗುಡೆಮ್ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಈ ಹಿಂದೆ ಮೂರು ವಿವಾಹವಾಗಿದ್ದ ಕೃಷ್ಣರಾಜು, 2023 ಡಿಸೆಂಬರ್​ನಲ್ಲಿ ಸೂರ್ಯಪೇಟೆ ಮಂಡಲದ ಸಪವತ್ತಂಡದ ಅಪ್ರಾಪ್ತ ವಯಸ್ಕ ಹುಡುಗಿಯನ್ನು ನಾಲ್ಕನೇ ಬಾರಿಗೆ ವಿವಾಹವಾದನು. ಅಲ್ಲದೆ, ಇತ್ತೀಚೆಗೆ, ಐದನೇ ಮದುವೆಗೆ ಸಿದ್ಧತೆ ನಡೆಸುತ್ತಿದ್ದನು ಎಂದಿದ್ದಾರೆ.

ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ, ಸೂರ್ಯಪೇಟೆ ಜಿಲ್ಲಾ ಎಸ್ಪಿ ನರಸಿಂಹ ಮುನಗಲ ಅವರು ಸಿಐ ರಾಮಕೃಷ್ಣ ರೆಡ್ಡಿ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿದರು. ತನಿಖೆಯ ನಂತರ, ಎಸ್ಪಿ ಅವರು ಈ ತಿಂಗಳ 12 ರಂದು ಕಾನ್ಸ್​ಟೆಬಲ್​ ಕೃಷ್ಣರಾಜು ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದರು.

ಅಂದಹಾಗೆ, ಈ ಕೃಷ್ಣರಾಜು ಸಪವತ್ತಂಡದ ಸರ್ಕಾರಿ ಶಿಕ್ಷಕ ನಾರಾಯಣ ಅವರ ಮಗ. ನಾರಾಯಣ ಮತ್ತು ಹುಡುಗಿಯ ತಾಯಿ ಒಟ್ಟಾಗಿ ಆಕೆಯನ್ನು ಕೃಷ್ಣರಾಜು ಅವರಿಗೆ ಮದುವೆ ಮಾಡಿಕೊಟ್ಟರು. ಬಾಲಕಿಯ ತಂದೆ, ಶನಿವಾರ (ಆಗಸ್ಟ್​ 23) ಸೂರ್ಯಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆಕೆಯನ್ನು ಕೃಷ್ಣರಾಜು ಅವರಿಗೆ ಕೊಟ್ಟು ಬಲವಂತವಾಗಿ ಮದುವೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಈ ಪ್ರಕರಣ ಸಂಬಂಧ ಕಾನ್‌ಸ್ಟೆಬಲ್ ಕೃಷ್ಣರಾಜು ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದ್ದು, ಬಾಲಕಿಯ ತಾಯಿ ಮತ್ತು ಮದುವೆಗೆ ಪ್ರೋತ್ಸಾಹಿಸಿದ ಸರ್ಕಾರಿ ಶಿಕ್ಷಕ ನಾರಾಯಣ ವಿರುದ್ಧ ಬಾಲ್ಯವಿವಾಹ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಐ ಬಾಲುನಾಯಕ್ ತಿಳಿಸಿದ್ದಾರೆ. (ಏಜೆನ್ಸೀಸ್​)