ಶಿವಮೊಗ್ಗ: ಕನ್ನಡವನ್ನು ಬಳಸಿದಷ್ಟು ಉಳಿಯುತ್ತದೆ. ಚಿಕ್ಕ ಶಬ್ದಗಳನ್ನು ನಾವು ಆಂಗ್ಲಭಾಷೆಯಲ್ಲಿ ಹೇಳುವುದನ್ನು ರೂಢಿಸಿಕೊಂಡಿದ್ದೇವೆ. ವಾಟರ್, ಸ್ಪೂನ್ ಮುಂತಾದ ಆಂಗ್ಲ ಪದಗಳ ಬದಲು ಕನ್ನಡ ಶಬ್ದಗಳನ್ನೇ ಬಳಕೆ ಮಾಡಬೇಕು ಎಂದು ಬಸವ ಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.
ಗೆಳೆಯರ ಬಳಗದಿಂದ ಮಂಗಳವಾರ ಏರ್ಪಡಿಸಿದ್ದ 14ನೇ ವಾರ್ಷಿಕೋತ್ಸವ, ಕನ್ನಡ ರಾಜ್ಯೋತ್ಸವ ಮತ್ತು ಗೆಳೆಯರ ಬಳಗ ಸೌಹಾರ್ದ ಸಹಕಾರ ಸಂಘದ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, ಕನ್ನಡ ಅನ್ನದ ಭಾಷೆಯಾಗಬೇಕು ಎಂದು ತಿಳಿಸಿದರು.
ನವೆಂಬರ್‌ನಲ್ಲಿ ಕನ್ನಡ ಹೋರಾಟ ಸಲ್ಲದು. ಎಲ್ಲ ಖಾಸಗಿ ಕಚೇರಿಗಳು, ಬ್ಯಾಂಕ್‌ಗಳು, ಸರ್ಕಾರಿ ಕಚೇರಿಗಳು ಸೇರಿದಂತೆ ಎಲ್ಲೆಡೆ ಕನ್ನಡ ಬಳಕೆ ಕಡ್ಡಾಯ ಎಂಬ ಆದೇಶವಾಗಬೇಕು. ಕನ್ನಡಿಗರ ನೇಮಕಾತಿ ಹೆಚ್ಚಾಗಬೇಕು. ಬೇರೆ ಭಾಷೆಗಳ ಮೇಲೆ ದ್ವೇಷ ಬೇಡ, ಆದರೆ ನಮ್ಮ ಭಾಷೆಯ ಬಗ್ಗೆ ಅಧಿಕಾರದ ಪ್ರೀತಿ ಇರಬೇಕು ಎಂದರು.
ಕನ್ನಡಕ್ಕೆ ಯಾವುದೇ ಧರ್ಮದ ಹಂಗಿಲ್ಲ. ಮನೆಭಾಷೆ ಯಾವುದೇ ಆಗಿರಲಿ ಹೊರಗಿನ ಭಾಷೆ ಕನ್ನಡವೆ ಆಗಬೇಕು. ಯಾವುದೇ ಸಂಘಗಳು ಆರ್ಥಿಕ ಸದೃಢಗೊಳ್ಳಲು ಸಂಘಟನೆ ಮತ್ತು ಸಹಕಾರ ಬೇಕೇಬೇಕು. ಈ ನಿಟ್ಟಿನಲ್ಲಿ ಗೆಳೆಯರ ಬಳಗ ಸಹಕಾರ ಸಂಘವನ್ನು ಸ್ಥಾಪಿಸುತ್ತಿರುವುದು ಶ್ಲಾಘನೀಯ ಎಂದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು, ಕರಾಟೆ ಸ್ಪರ್ಧೆಯಲ್ಲಿ ಬಂಗಾರ ಪದಕ ಪಡೆದವರು, ಪತ್ರಕರ್ತ ನಾಗರಾಜ್ ಶೆಣೈ, ಸೈನಿಕ ಟಿ.ವಿ.ಪ್ರಶಾಂತ್ ಅವರನ್ನು ಸನ್ಮಾನಿಸಲಾಯಿತು.
ಧರ್ಮಗುರು ರೆವರೆಂಡ್ ಡಾ. ಜೇಸುದಾಸ್, ಧರ್ಮಗುರು ಮೌಲಾನ ಶಾಹುಲ್ ಹಮೀದ್ ಇದ್ದರು. ಗೆಳೆಯರ ಬಳಗದ ಅಧ್ಯಕ್ಷ ಎಂ.ಆರ್.ಅನಿಲ್ ಕುಂಚಿ, ಜಿಲ್ಲಾಧ್ಯಕ್ಷ ಪರಮೇಶ್ವರಪ್ಪ, ಲೇಖಕ ಯು.ಎನ್.ಸಂಗನಾಳಮಠ, ಚಂದ್ರಕಲಾ ಮಾ. ಇಟಗಿಮಠ, ಶುಭಾ ಪ್ರಕಾಶ್ ಕುಸ್ಕೂರು, ಮೋಹನ್‌ಕುಮಾರ್, ಎಸ್.ಪಿ.ಶೇಷಾದ್ರಿ ಇತರರಿದ್ದರು.