ನ್ಯೂಸ್

ಗೊತ್ತು ಗುರಿಯಿಲ್ಲದ ಸಮೀಕ್ಷೆ: ಅಶೋಕ್ ಟೀಕೆ | Tax money waste

ಬೆಂಗಳೂರು: ಪೂರ್ವ ತಯಾರಿಯಿಲ್ಲದ ಜಾತಿ ಜನಗಣತಿಗೆ ಮತ್ತೆ ಅವಧಿ ವಿಸ್ತರಿಸಲಾಗಿದೆ. ಇದಕ್ಕಾಗಿ ಅ.18ರವರೆಗೆ ಸರ್ಕಾರಿ, ಅನುದಾನಿತ ಶಾಲೆಗಳಿಗೆ ರಜೆ ನೀಡಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ಹೊಡೆತ ಬೀಳಲಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಕಳವಳ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು, ಕೇಳಿದ ಪ್ರಶ್ನೆಗಳ ಪಟ್ಟಿ ಪ್ರಕಾರ ಒಬ್ಬರಿಗೆ ಒಂದು ತಾಸಿಗೂ ಹೆಚ್ಚು ಅವಧಿ ಬೇಕಾಗುತ್ತದೆ. ಏಳು ಕೋಟಿ ಜನರ ಸಮೀಕ್ಷೆ 15 ದಿನಗಳಲ್ಲಿ ಅಸಾಧ್ಯವೆಂಬ ಪ್ರತಿಪಕ್ಷಗಳ ಪ್ರತಿಪಾದನೆ ದೃಢಪಟ್ಟಿದೆ ಎಂದಿದ್ದಾರೆ.

ಯಾವುದೇ ಪೂರ್ವಸಿದ್ಧತೆ, ರೂಪುರೇಷೆ, ಗೊತ್ತುಗುರಿಯಿಲ್ಲದೆ ಕೇವಲ ರಾಜಕೀಯ ತೆವಲಿಗೆ ಮಾಡುತ್ತಿರುವ ಈ ಜಾತಿ ಜನಗಣತಿಯಿಂದ ಕನ್ನಡಿಗರಿಗೆ ನಯಾ ಪೈಸೆ ಉಪಯೋಗವಿಲ್ಲ ಎಂದು ಟೀಕಿಸಿದ್ದಾರೆ.

ಜಾತಿ ಜನಗಣತಿ ಹೆಸರಿನಲ್ಲಿ 10 ವರ್ಷಗಳ ಹಿಂದೆಯೇ 150 ಕೋಟಿ ರೂ. ಪೋಲು ಮಾಡಿದ್ದ ಸಿದ್ದರಾಮಯ್ಯ ಸರ್ಕಾರ, ಈಗ ಮತ್ತೊಮ್ಮೆ 450 ಕೋಟಿ ರೂ. ಕನ್ನಡಿಗರ ತೆರಿಗೆ ಹಣವನ್ನು ಬೇಕಾಬಿಟ್ಟಿ ಪೋಲು ಮಾಡುತ್ತಿದೆ ಎಂದು ಆರ್.ಅಶೋಕ್ ಆರೋಪಿಸಿದ್ದಾರೆ.