| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಎದುರಿಸಲು ಪಕ್ವವಾದ ವಿಷಯಕ್ಕೆ ಹುಡುಕಾಡು ತ್ತಿರುವ ಕಾಂಗ್ರೆಸ್, ನಿರುದ್ಯೋಗ ವಿಚಾರವನ್ನು ಪ್ರಮುಖ ದಾಳವಾಗಿ ಪರಿಗಣಿಸಲು ಬಯಸಿದೆ. ಇದಕ್ಕಾಗಿ ರಾಜ್ಯಾದ್ಯಂತ ವಿಶೇಷ ಸಮೀಕ್ಷೆ ನಡೆಸಲಿದೆ. ಕೋವಿಡ್- ಲಾಕ್ಡೌನ್ ಬಳಿಕ ನಿರೋದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಗುತ್ತಾರೆ, ನಿರುದ್ಯೋಗ ಸಮಸ್ಯೆ ಗಂಭೀರವಾಗಿದ್ದರೂ, ಸರ್ಕಾರದ ವಿರುದ್ಧ ಆ ವಿಷಯ ಪರಿಣಾಮಕಾರಿಯಾಗಿ ನಾಟುತ್ತಿಲ್ಲ. ನಿರುದ್ಯೋಗಿಗಳನ್ನು ಒಟ್ಟಿಗೆ ಜೋಡಿಸಿ, ಅವರನ್ನು ಪ್ರತಿಭಟಿಸಲು ಹುರಿದುಂಬಿಸುವುದು ಆಲೋಚನೆೆ.
ಹೀಗಿದೆ ಪ್ಲ್ಯಾನ್: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಯುವ ಕಾಂಗ್ರೆಸ್ ನಡುವೆ ಈ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆದಿದೆ. ಪ್ರಾಥಮಿಕ ಹಂತದಲ್ಲಿ ನೀಲಿನಕ್ಷೆ ಸಿದ್ಧಪಡಿಸಿದ್ದು, ರಾಹುಲ್ ಗಾಂಧಿ ಸಮ್ಮುಖದಲ್ಲಿಯೂ ಪ್ರಸ್ತಾಪಿಸಲಾಗಿದೆ. ಸರಾಸರಿ 1,200 ಮತದಾರರನ್ನು ಹೊಂದಿರುವ ಬೂತ್ಗೆ ಪಕ್ಷದಿಂದ ನೇಮಕ ಮಾಡುತ್ತಿರುವ ಡಿಜಿಟಲ್ ಯೂತ್, ತಮ್ಮ ಭಾಗದ 20-25 ನಿರುದ್ಯೋಗಿಗಳನ್ನು ಪತ್ತೆಹಚ್ಚಿ ಸಂರ್ಪಸುವುದು. ಅವರ ಮಾಹಿತಿ ಕಲೆ ಹಾಕುವುದು, ನಂತರದ ಹಂತದಲ್ಲಿ ಬ್ಲಾಕ್ ಹಾಗೂ ಜಿಲ್ಲಾ ಮಟ್ಟದಲ್ಲಿ ಸಮಾವೇಶ ಆಯೋಜಿಸಿ ಅವರಿಗೆ ಆಹ್ವಾನ ನೀಡಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಕನಿಷ್ಠ 10 ಸಾವಿರ ನಿರುದ್ಯೋಗಿಗಳ ಸಮಾವೇಶ ನಡೆಸಬೇಕೆಂಬ ಉದ್ದೇಶ ಹೊಂದಲಾಗಿದೆ. ಆ ಬಳಿಕ ರಾಜ್ಯ ಮಟ್ಟದ ಸಮಾವೇಶಕ್ಕೆ 3 ಲಕ್ಷ ನಿರುದ್ಯೋಗಿಗಳನ್ನು ಒಟ್ಟು ಕೂಡಿಸಬೇಕೆಂಬ ಗುರಿ ಹಾಕಿಕೊಳ್ಳಲಾಗಿದೆ. ಇದೇ ವೇಳೆ ಇಷ್ಟು ಸಂಖ್ಯೆಯ ನಿರುದ್ಯೋಗಿಗಳ ಅಂಕಪಟ್ಟಿ ಪ್ರತಿಯನ್ನು ಪ್ರಧಾನಿಗೆ ಕಳಿಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುತ್ತದೆ. ಇದೇ ವಿಚಾರದಲ್ಲಿ ಯುವ ಕಾಂಗ್ರೆಸ್ ಮಿಸ್ಡ್ ಕಾಲ್ ಅಭಿಯಾನ ನಡೆಸಲೂ ತಯಾರಿ ಮಾಡಿಕೊಳ್ಳುತ್ತಿದೆ.
ನಿರುದ್ಯೋಗ ಸಮಸ್ಯೆ ಗಂಭೀರವಾಗುತ್ತಿದೆ. ಸರ್ಕಾರ ಈ ಬಗ್ಗೆ ಗಮನ ಕೊಡದೆ ವಿಷಯಾಂತರ ಮಾಡಿ ಹಿಜಾಬ್, ಹಲಾಲ್ ಎಂದು ಹೊರಟಿದೆ. ನಾವು ಗಂಭೀರವಾಗಿ ಪರಿಗಣಿಸಿ ಹೋರಾಟ ಮಾಡುತ್ತೇವೆ, ಸಂಕಷ್ಟದಲ್ಲಿರುವವರಿಗೆ ನೆರವನ್ನೂ ಕೊಡುವವರಿದ್ದೇವೆ. | ಬಿ.ವಿ.ಶ್ರೀನಿವಾಸ್ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ
ಜೂನ್ನಲ್ಲಿ ನೆರವು: ಕೋವಿಡ್ನಿಂದ ಸಂಕಷ್ಟಕ್ಕೆ ಸಿಲುಕಿದ ಕುಟುಂಬದ ಯುವಕರನ್ನು ಉತ್ಸಾಹ ತುಂಬಲು ರಾಹುಲ್ ಗಾಂಧಿ ಜನ್ಮದಿನದಂದು (ಜೂ.19) ರಾಜ್ಯವ್ಯಾಪಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸಂಕಷ್ಟದಲ್ಲಿರುವ ಯುವಕರಿಗೆ ನೆರವು, ರೇಷನ್ ಕಿಟ್ ವಿತರಣೆ ಸೇರಿ ಸ್ವಾವಲಂಬಿಯಾಗಲು ಅವಶ್ಯಕವಾದ ಸಹಾಯ ನೀಡಬೇಕೆಂಬ ಕಲ್ಪನೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕ್ರಮ ರೂಪಿಸುತ್ತಿದೆ.