ಬೆಂಗಳೂರು: ವಕ್ಫ್ ಆಸ್ತಿಗಳ ಒತ್ತುವರಿ ಬಗ್ಗೆ ಖಾಸಗಿ ಸಂಸ್ಥೆಯಿಂದಲೂ ಪ್ರತ್ಯೇಕ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯದಲ್ಲಿ ಜಿಲ್ಲಾ ವಕ್ಫ್ ಅಧಿಕಾರಿಗಳ ಸಭೆ ನಡೆಸಿದ ಅವರು, ಖಾಸಗಿ ಸಂಸ್ಥೆ ನೀಡುವ ಸಮೀಕ್ಷಾ ವರದಿ ಹಾಗೂ ಅಧಿಕಾರಿಗಳು ನೀಡುವ ವರದಿ ತಾಳೆ ಆಗಬೇಕು. ಒಂದೊಮ್ಮೆ ತಾಳೆ ಆಗದಿದ್ದರೆ ಸಂಬಂಧ ಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ವಕ್ಫ್ ಆಸ್ತಿ ಒತ್ತುವರಿಗೆ ಸಂಬಂಧಿಸಿದಂತೆ ಪ್ರತಿ ಜಿಲ್ಲೆ ಹಾಗೂ ತಾಲೂಕುಗಳ ಸಮಗ್ರ ವರದಿ ಒಂದು ತಿಂಗಳಲ್ಲಿ ಸಲ್ಲಿಸಲು ಗಡುವು ನೀಡಿದರು.
ಜಿಲ್ಲಾವಾರು ವಕ್ಫ್ ಆಸ್ತಿಗಳ ಸರ್ಕಾರಿ ಒತ್ತುವರಿ, ಖಾಸಗಿ ಒತ್ತುವರಿ, ನ್ಯಾಯಾಲಯದಲ್ಲಿರುವ ಪ್ರಕರಣ ಸೇರಿ ಸಮಗ್ರ ಮಾಹಿತಿ ಜಿಲ್ಲಾ ಅಧಿಕಾರಿಗಳು ಸಲ್ಲಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಗಳಲ್ಲಿ ಕೆಲವು ಅಧಿಕಾರಿಗಳು ನ್ಯಾಯಾಲಯದಲ್ಲಿರುವ ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸದೆ ನ್ಯಾಯಾಲಯಕ್ಕೆ ಹಾಜಾರಾಗದೆ ಪರೋಕ್ಷವಾಗಿ ಒತ್ತುವರಿದಾರರ ಜತೆ ಶಾಮೀಲಾಗಿರುವ ಮಾಹಿತಿ ಇದೆ. ವರ್ತನೆ ಸರಿಪಡಿಸಿಕೊಳ್ಳದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹಣ ಮಾಡಲು ವಕ್‌ಫ್ ಇಲಾಖೆಗೆ ಬರಬೇಡಿ. ಇದು ದೇವರ ಕೆಲಸ. ಆರೋಪ ಕೇಳಿ ಬಂದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ವಕ್ಫ್ ಅಸ್ತಿಗಳ ರಕ್ಷಣೆಗೆ ಕಾಂಪೌಂಡ್ ಗೋಡೆ ನಿರ್ಮಿಸಲು ಅಗತ್ಯ ಇರುವ ಕಡೆ ಪ್ರಸ್ತಾವನೆ ಸಲ್ಲಿಸಿ. ವಕ್ಫ್ ಆಸ್ತಿ ಎಂದು ಗುರುತಿಸುವಂತಾಗಲು ಏಕ ರೂಪದ ಕಾಪೌಂಡ್ ಹಾಕಬೇಕು ಎಂದು ತಿಳಿಸಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್, ವಕ್‌ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ನಿರ್ದೇಶಕ ಮೊಕಾಶಿ ಜಿಲಾನಿ ಉಪಸ್ಥಿತರಿದ್ದರು.