ನ್ಯೂಸ್

ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಮೀಕ್ಷೆ ಅನಿವಾರ್ಯ: CM ಸಿದ್ದರಾಮಯ್ಯ

ನವದೆಹಲಿ: ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸ್ಥಿತಿಗತಿಯ ಮಾಹಿತಿ ಅತ್ಯಗತ್ಯವಾಗಿದೆ ಎಂದು ಮುಖ್ಯಮಂತ್ರಿ(CM) ಸಿದ್ದರಾಮಯ್ಯ ತಿಳಿಸಿದರು.

ನವದೆಹಲಿಯ ಕರ್ನಾಟಕ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಪ್ರತಿಯೊಬ್ಬ ಪ್ರಜೆಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಹಾಗೂ ಔದ್ಯೋಗಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆಯುವುದು ಅತ್ಯಗತ್ಯ. ನಮ್ಮ ಸಂವಿಧಾನ ಸಾಮಾಜಿಕ ನ್ಯಾಯವನ್ನು ಬೆಂಬಲಿಸುತ್ತದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಸಮಾನತೆಯೆಂಬುದು ದೇಶದಲ್ಲಿ ಸ್ಥಾಪಿತವಾಗಿದೆಯೇ ಎಂಬ ಬಗ್ಗೆ ತಿಳಿದುಕೊಳ್ಳಲು ಇಂತಹ ಸಮೀಕ್ಷೆ ನಡೆಸಲೇಬೇಕಾಗುತ್ತದೆ. ಸಾಮಾಜಿಕ ಆರ್ಥಿಕ ಸಮೀಕ್ಷೆ ನಡೆಸಬೇಕೆಂಬುದು ರಾಹುಲ್ ಗಾಂಧಿಯವರು ಬದ್ಧರಾಗಿದ್ದಾರೆ ಎಂದರು.

ಕೇವಲ ಜಾತಿಗಣತಿ ಮಾಡುವ ಜೊತೆಗೆ ಆರ್ಥಿಕ ಸಾಮಾಜಿಕ ಸಮೀಕ್ಷೆ ನಡೆಸಿದಾಗ ಮಾತ್ರ, ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಾಧ್ಯವಾಗುತ್ತದೆ. ಇದು ಭಾಗೀಧಾರಿ ನ್ಯಾಯ ಸಮ್ಮೇಳನದ ಮೂಲ ಉದ್ದೇಶ ಎಂದು ವಿವರಿಸಿದರು. ಮುಂದಿನ ದಿನಗಳಲ್ಲಿ ದೇಶದೆಲ್ಲೆಡೆ ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಮಹದಾಯಿ ಯೋಜನೆ-ಗೋವಾ ಸಿಎಂ ನಡೆ ಸರಿಯಿಲ್ಲ

ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಮಾತನಾಡುತ್ತಾ, ಮಹದಾಯಿ ವಿಚಾರ ನ್ಯಾಯಮಂಡಳಿಯಲ್ಲಿ ಈಗಾಗಲೇ ಇತ್ಯರ್ಥವಾಗಿದ್ದರೂ, ಗೋವಾ ಸಿಎಂ ನ ಹೇಳಿಕೆ ಸರಿಯಾದುದಲ್ಲ. ಮಹದಾಯಿ ಯೋಜನೆಗೆ ಪರಿಸರ ಒಪ್ಪಿಗೆ ಸಿಗಬೇಕಾಗಿದೆಯೇ ಹೊರತು, ಉಚ್ಛ ನ್ಯಾಯಾಲಯದಲ್ಲಿಯೂ ಈ ವಿಚಾರ ಇತ್ಯರ್ಥವಾಗಿದೆ.

ರಾಹುಲ್ ಗಾಂಧಿ ಜತೆ ಭೇಟಿ

ಆಗಸ್ಟ್ 1 ಮತ್ತು 2 ರಂದು ಎಐಸಿಸಿ ಕಾನೂನು ಕೋಶದ ವಿಚಾರ ಸಂಕಿರಣ ನಡೆಯಲಿದ್ದು, ಆ ಸಂದರ್ಭದಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿ ಮಾಡುತ್ತೇನೆ ಎಂದರು.