Surrogacy Racket: ಐವಿಎಫ್ ಚಿಕಿತ್ಸೆ ಮೊರೆ ಹೋಗಿದ್ದ ದಂಪತಿಗೆ ತಮ್ಮದಲ್ಲದ ಮಗವನ್ನು ಕೊಟ್ಟ ಫರ್ಟಿಲಿಟಿ ಸೆಂಟರ್ ವೈದ್ಯರು ಮತ್ತು ಸಿಬ್ಬಂದಿಗಳು, ಗಂಡ-ಹೆಂಡತಿಯಿಂದ ಚಿಕಿತ್ಸೆ ವೆಚ್ಚದ ಹೆಸರಿನಲ್ಲಿ ಬರೋಬ್ಬರಿ 35 ಲಕ್ಷ ರೂ. ಪಡೆದು ಮೋಸದ ಜಾಲ ಇದೀಗ ಬಟಾಬಯಲಾಗಿದೆ. ಐವಿಎಫ್ ಚಿಕಿತ್ಸೆಯಡಿ ಮಗುವನ್ನು ಮಾಡಿಸಿಕೊಡುವ ನೆಪದಲ್ಲಿ ಬಡವರ ಮಗುವನ್ನು ಶ್ರೀಮಂತ ದಂಪತಿಗಳಿಗೆ ದುಬಾರಿ ಹಣಕ್ಕಾಗಿ ಮಾರಾಟ ಮಾಡುತ್ತಿದ್ದ ದಂಧೆಕೋರರ ಅಸಲಿ ಮುಖ ಕಡೆಗೂ ಕಳಚಿಬಿದ್ದಿದೆ.
ಇದನ್ನೂ ಓದಿ: ಐದನೇ ಟೆಸ್ಟ್ ಪಂದ್ಯದಿಂದ ರಿಷಭ್ ಔಟ್: ಇವರೇ ನೋಡಿ ಪಂತ್ ಸ್ಥಾನ ತುಂಬುವ ಯುವ ಕ್ರಿಕೆಟಿಗ! Rishabh Pant
ಈ ಪ್ರಕರಣದ ಆರೋಪದಡಿ ಹೈದರಾಬಾದ್ನ ಸಿಕಂದರ್ಬಾದ್ ಪೊಲೀಸರು ಒಟ್ಟು 10 ಮಂದಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಫರ್ಟಿಲಿಟಿ ಕೇರ್ನಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರು ಸೇರಿ ಸಿಬ್ಬಂದಿಗಳು ಈ ದಂಧಯೆಲ್ಲಿ ಭಾಗಿಯಾಗಿರುವುದು ದಂಪತಿ ಶಂಕೆಯಿಂದ ಬೆಳಕಿಗೆ ಬಂದಿದೆ. ದಂಪತಿಗೆ ಬಾಡಿಗೆ ತಾಯ್ತನದ ಭರವಸೆ ಕೊಟ್ಟ ವೈದ್ಯರು, ಮಗುವನ್ನು ಬಡ ಕುಟುಂಬದಿಂದ ಖರೀದಿಸಿ, 2024ರಲ್ಲಿ ಐವಿಎಫ್ ಚಿಕಿತ್ಸೆ ಪಡೆಯಲು ಬಂದಿದ್ದ ಗಂಡ-ಹೆಂಡತಿಗೆ ಹಸ್ತಾಂತರಿಸಿರುವುದು ಗೊತ್ತಾಗಿದೆ. ಬಡ ಕುಟಂಬಕ್ಕೆ 90 ಸಾವಿರ ರೂ. ಹಣ ಕೊಟ್ಟು ಮಗುವನ್ನು ಖರೀದಿಸಿರುವ ಕಿರಾತಕರು, ಟ್ರೀಟ್ಮೆಂಟ್ ಹೆಸರಿನಲ್ಲಿ 35 ಲಕ್ಷ ರೂ. ಪಡೆದಿದ್ದಾರೆ ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.
ಭಾನುವಾರ (ಜು.27) ಹೈದರಾಬಾದ್ ಪೊಲೀಸರು ಪ್ರಮುಖ ಆರೋಪಿ ಯೂನಿವರ್ಸಲ್ ಸೃಷ್ಟಿ ಫರ್ಟಿಲಿಟಿ ಸೆಂಟರ್‌ನ ವೈದ್ಯೆ, ಡಾ. ಅಥಲೂರಿ ನಮ್ರತಾ (64), ಸರ್ಕಾರಿ ಗಾಂಧಿ ಆಸ್ಪತ್ರೆಯ ಅರಿವಳಿಕೆ ತಜ್ಞ ಡಾ. ನರ್ಗುಲಾ ಸದಾನಂದಮ್ (41) ಮತ್ತು ಏಜೆಂಟರು ಮತ್ತು ಟೆಕ್ನಿಷಿಯನ್ಗಳು ಸೇರಿ ಒಟ್ಟು 10 ಮಂದಿಯನ್ನು ಸದ್ಯ ಬಂಧಿಸಲಾಗಿದೆ. ಬಾಡಿಗೆ ತಾಯ್ತನದ ಕಾರ್ಯವಿಧಾನದ ಹೆಸರಿನಲ್ಲಿ ಗ್ರಾಹಕರನ್ನು ವಂಚಿಸಿದ್ದಲ್ಲದೇ, ಶಿಶು ಮಾರಾಟ ಜಾಲವನ್ನು ನಡೆಸುತ್ತಿದ್ದ ಆರೋಪದಡಿ ಕಿರಾತಕರ ಮೇಲೆ ಪ್ರಕರಣ ದಾಖಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ವೈದ್ಯೆ ನಮ್ರತಾ, ದಂಪತಿಗೆ ಮಗುವನ್ನು ಹಸ್ತಾಂತರಿಸಿದ್ದರು. ಶಿಶುವನ್ನು ಎತ್ತಿಕೊಂಡ ಖುಷಿಯಲ್ಲಿದ್ದ ಜೋಡಿಗೆ, ಇದು ತಮ್ಮ ಮಗುವಲ್ಲ ಎಂಬ ಅನುಮಾನ ಮೂಡಿತ್ತು. ಕಾರಣ, ಆ ಶಿಶುವಿನಲ್ಲಿ ತಮ್ಮ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ ಎಂಬುದು ದಂಪತಿಯ ಆರೋಪವಾಗಿತ್ತು. ಈ ಹಿನ್ನಲೆ ಅವರು ಖಾಸಗಿ ಡಿಎನ್‌ಎ ಪರೀಕ್ಷೆಯನ್ನು ಮಾಡಿಸುವ ಮೂಲಕ ಮಗು ತಮ್ಮದಲ್ಲ ಎಂಬುದನ್ನು ಸ್ಪಷ್ಟಪಡಿಸಿಕೊಂಡರು. ಇದರ ಬೆನ್ನಲ್ಲೇ ಪೊಲೀಸರಿಗೆ ನೀಡಿದರು. ಈ ದೂರಿನ ಆಧಾರದ ಮೇಲೆ ಹೈದರಾಬಾದ್ ಪೊಲೀಸರು ಕ್ರಮ ಕೈಗೊಂಡರು ಎಂದು ವರದಿಯಾಗಿದೆ.
ಅಚ್ಚರಿ ಸಂಗತಿ ಎಂದರೆ, 2021ರಲ್ಲೇ ಸೃಷ್ಟಿ ಫರ್ಟಿಲಿಟಿ ಕೇಂದ್ರದ ಪರವಾನಗಿ ರದ್ದು ಮಾಡಲಾಗಿದೆ. ಈ ವಿಚಾರ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಈ ಜಾಲವನ್ನು ವೈದ್ಯೆ ನಮ್ರತಾ ಮುನ್ನಡೆಸುತ್ತಿದ್ದು, ಬಹಳ ವರ್ಷಗಳಿಂದ ಅಕ್ರಮವಾಗಿ ಯಾರ ಕಣ್ಣಿಗೂ ಸಿಕ್ಕಿಕೊಳ್ಳದಂತೆ ನಡೆಸುತ್ತಿದ್ದರು. ಕೇವಲ ಇದೊಂದು ಮಾತ್ರವಲ್ಲದೇ, ಕೊಂಡಾಪುರ (ಹೈದರಾಬಾದ್), ವಿಜಯವಾಡ ಮತ್ತು ವಿಶಾಖಪಟ್ಟಣದಲ್ಲಿ ಇನ್ನೂ ಮೂರು ಫರ್ಟಿಲಿಟಿ ಸೆಂಟರ್ಗಳನ್ನು ನಡೆಸುತ್ತಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಇದೆಲ್ಲದರ ಮೇಲೆಯೂ ಖಾಕಿ ಪಡೆ ದಾಳಿ ನಡೆಸಿದೆ. ಪ್ರಸ್ತುತ, ಪ್ರಕರಣದ ತನಿಖೆ ಇನ್ನಷ್ಟು ಚುರುಕಾಗಿ ಸಾಗಿದೆ,(ಏಜೆನ್ಸೀಸ್).