ಬೆಂಗಳೂರು: ಚನ್ನಪಟ್ಟಣಕ್ಕೆ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗುವುದು. ಕಾದು ನೋಡಿ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಕುತೂಹಲ ಮೂಡಿಸಿದ್ದಾರೆ.
ಜೆ.ಪಿ.ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿಯಾಗಲು ಹಲವಾರು ಹೆಸರುಗಳು ಚರ್ಚೆಯಲ್ಲಿ ಇವೆ. ಅಂತಿಮವಾಗಿ ಕಾರ್ಯಕರ್ತರ ಅಭಿಪ್ರಾಯದಂತೆ ತೀರ್ಮಾನ ಮಾಡುತ್ತೇವೆ. ಕಾದು ನೋಡಿ, ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗುವುದು ಎಂದರು.
ಈ ಬಗ್ಗೆ ಬಿಜೆಪಿ ದೆಹಲಿ, ರಾಜ್ಯದ ನಾಯಕರ ಜತೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಉಪ ಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್ ಸ್ಪರ್ಧೆ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ನನ್ನ ಕಾರ್ಯಕರ್ತರ ಅಭಿಪ್ರಾಯ ಪಡೆಯಬೇಕು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿ ಆಯ್ಕೆ ತೀರ್ಮಾನ ಮಾಡಬೇಕು. ಅಭ್ಯರ್ಥಿ ಬಗ್ಗೆ ಬಿಜೆಪಿಯ ಕೇಂದ್ರದ ನಾಯಕರ ಜತೆಯಾಗಲಿ, ರಾಜ್ಯದ ನಾಯಕರುಗಳ ಜತೆ ಇನ್ನೂ ಚರ್ಚೆ ಮಾಡಿಲ್ಲ. ನನ್ನ ಕಾರ್ಯಕರ್ತರ ಸಹಮತ ಇಲ್ಲದೇ ಯಾವುದನ್ನೂ ತೀರ್ಮಾನ ಮಾಡಲು ಆಗುವುದಿಲ್ಲ. ಯೋಗೇಶ್ವರ್ ಅವರು ಆ ಕ್ಷೇತ್ರದಲ್ಲಿ ಹಿಂದೆ ಶಾಸಕರಾಗಿದ್ದವರು. ಆದರೆ ಅಂತಿಮವಾಗಿ ಎಲ್ಲರ ಜತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದರು.