ನ್ಯೂಸ್

'ಕಂಗುವ' ವರ್ಸಸ್ 'ವೆಟ್ಟೈಯನ್' ಘರ್ಷಣೆ ತಪ್ಪಿಸಿದ ಸೂರ್ಯ! ರಜನಿಕಾಂತ್ ಕುರಿತು ಹೇಳಿದ್ದೇನು ಗೊತ್ತಾ?

Webdesk - Narayanaswamy

ಚೆನ್ನೈ: ಸೂರ್ಯ ಅಭಿನಯದ 'ಕಂಗುವ' ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಅ.10ರಂದು ರಜನಿಕಾಂತ್​ ಅವರ 'ವೆಟ್ಟೈಯನ್'ಬಿಡುಗಡೆಯಾಗಲಿದ್ದು, ಘರ್ಷಣೆಯನ್ನು ತಪ್ಪಿಸಲು

ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಶೀಘ್ರದಲ್ಲೇ ಬಿಡುಗಡೆ ದಿನಾಂಕ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ತಮ್ಮ ಸಹೋದರ ಕಾರ್ತಿ ಅಭಿನಯದ 'ಮೇಯಳಗನ್' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸೂರ್ಯ, ತಮ್ಮ 'ಕಂಗುವ' ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿದೆ. ಸಿರುತೈ ಶಿವ ನಿರ್ದೇಶನದ ಈ ಚಿತ್ರವು ಅ.10 ರಂದು ಬಿಡುಗಡೆ ಮಾಡುವುದಾಗಿ ಈ ಹಿಂದೆ ಘೋಷಿಸಲಾಗಿತ್ತು. ಆದರೆ ರಜನಿಕಾಂತ್ ಅವರ 'ವೆಟ್ಟೈಯನ್' ಸಹ ಅದೇ ದಿನದಂದು ಬಿಡುಗಡೆಯಾಗುತ್ತಿರುವುದರಿಂದ ಎರಡೂ ಚಿತ್ರಗಳ ಕಲೆಕ್ಷನ್​ಗೆ ಧಕ್ಕೆಯಾಗಬಹುದು ಎಂದು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದ್ದಾರೆ.

ಅಭಿಮಾನಿಗಳು ಬೇಸರಗೊಳ್ಳಬಾರದು. ರಜನಿಕಾಂತ್ ತನಗಿಂತ ಹಿರಿಯರು. ಅವರ ಚಿತ್ರ ಬಿಡುಗಡೆಗೆ ತೊಡಕಾಗಬಾರದು. ಅವರ ಬಗ್ಗೆ ಗೌರವವಿದೆ. ಹೀಗಾಗಿ ಬಿಡುಗಡೆ ದಿನಾಂಕ ಮುಂದೂಡಲಾಗಿದೆ. ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಅಕ್ಟೋಬರ್ 10ರಂದು ‘ವೆಟ್ಟೈಯನ್’ ಬರುತ್ತಿದೆ. ನಾವು ಗೌರವದಿಂದ ಚಿತ್ರಕ್ಕೆ ದಾರಿ ಮಾಡಿಕೊಡಬೇಕು. ರಜನಿಕಾಂತ್ ನನಗಿಂತ ಹಿರಿಯರು. ನಾನು ಹುಟ್ಟಿದಾಗಲೇ ಅವರು ನಟಿಸಲು ಬಂದಿದ್ದರು. ಅವರು 50 ವರ್ಷಗಳಿಂದ ತಮಿಳು ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದಾರೆ. ಸೂಪರ್‌ಸ್ಟಾರ್ ಅವರ ಚಿತ್ರ ಮೊದಲು ಬಂದರೆ ಉತ್ತಮ ಎಂದು ನಾನು ಭಾವಿಸುತ್ತೇನೆ. ನೀವು ನನ್ನೊಂದಿಗೆ ಇರುತ್ತೀರಿ ಎಂದು ನಾನು ನಂಬುತ್ತೇನೆ ಎಂದು ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ.

ತಮಿಳು ಚಿತ್ರರಂಗದಲ್ಲಿ ವಿಶೇಷವಾದ ಚಿತ್ರವೊಂದನ್ನು ತೆರೆಗೆ ತರಲು ಎರಡೂವರೆ ವರ್ಷದಿಂದ 1000ಕ್ಕೂ ಹೆಚ್ಚು ಮಂದಿ 'ಕಂಗುವ' ಚಿತ್ರಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ಕಷ್ಟಪಟ್ಟ ದುಡಿಮೆ ಎಲ್ಲೂ ಹೋಗುವುದಿಲ್ಲ ಎಂಬ ಬಲವಾದ ನಂಬಿಕೆ ನನಗಿದೆ. ಕಂಗುವ ತೆರೆಗೆ ಬಂದಾಗ ಪ್ರೇಕ್ಷಕರು ಆ ಪ್ರೀತಿ ಮತ್ತು ಗೌರವವನ್ನು ನೀಡುತ್ತೀರಿ ಎಂದು ನನಗೆ ಖಾತ್ರಿಯಿದೆ ಎಂದು ಸೂರ್ಯ ಬರವಸೆಯ ಮಾತುಗಳನ್ನಾಡಿದ್ದಾರೆ.