ನ್ಯೂಸ್

ಎಸ್‌ಡಿಎಂಸಿಗಳ ಜತೆ ಸುರೇಶ್ ಕುಮಾರ್ ಸಂವಾದ | Govt schools empowerment

ಮೃತ್ಯುಂಜಯ ಕಪಗಲ್

ಬೆಂಗಳೂರು: ಸರ್ಕಾರಿ ಶಾಲೆಗಳ ಸಬಲೀಕರಣದ ಹಾಗೂ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ವಿಶ್ವಾಸಾರ್ಹತೆ ಬೆಳೆಸುವ ಕುರಿತಂತೆ ರಾಜ್ಯದ ವಿವಿಧ ಭಾಗಗಳ ಅನೇಕ ಶಾಲಾಭಿವೃದ್ಧಿ ಸಮಿತಿಗಳ ಮುಖ್ಯಸ್ಥರ ಜತೆ ಶಾಸಕ ಹಾಗೂ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಂಗಳವಾರ ಸಂವಾದ ನಡೆಸಿದರು.

ಸಭೆಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಗದಗ, ದಾವಣಗೆರೆ, ಕೊಪ್ಪಳ ಮತ್ತು ರಾಯಚೂರು ಸೇರಿದಂತೆ ಒಟ್ಟು 15 ಜಿಲ್ಲೆಗಳಿಂದ ಎಸ್‌ಡಿಎಮ್ಸಿ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಶಿಕ್ಷಕರು ಸೇರಿದಂತೆ ಸುಮಾರು ನೂರಕ್ಕೂ ಹೆಚ್ಚು ಜನರು ಹಾಜರಿದ್ದರು.

ಸಭೆಯ ಮೊದಲ ಅವಧಿಯಲ್ಲಿ ಎಸ್‌ಡಿಎಮ್ಸಿ ಅಧ್ಯಕ್ಷರು ತಮ್ಮ ತಮ್ಮ ಶಾಲೆಗಳಲ್ಲಿ ಏನೇನು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ ಎಂಬುದರ ಕುರಿತು ಪ್ರಸ್ತಾಪಿಸಿದರು. ಎರಡನೇ ಅವಧಿಯಲ್ಲಿ ತಮ್ಮ ಶಾಲೆಗಳು ಎದುರಿಸುತ್ತಿರುವ ತೊಂದರೆ ಮತ್ತು ಪರಿಹಾರವನ್ನು ಹಂಚಿಕೊಂಡರು.

ಗುರಿ ಸಾಧನೆಗೆ ಪ್ರಯತ್ನ

ಸರ್ಕಾರಿ ಶಾಲೆ ಶಿಕ್ಷಕರನ್ನು ಶಿಕ್ಷಣ ನೀಡಲಿಕ್ಕೆ ಮಾತ್ರ ಬಳಸಿಕೊಳ್ಳಬೇಕು ಎಂಬುದನ್ನು ರಾಜ್ಯವ್ಯಾಪ್ತಿ ತಿಳಿಹೇಳುವ ಕೆಲಸ ಮಾಡುವುದು, ಶಾಲಾಭಿವೃದ್ಧಿ ಸಮಿತಿಯವರಿಗೆ ತಮ್ಮ ಕಾರ್ಯವ್ಯಾಪ್ತಿಯ ಕುರಿತು ಸೂಕ್ತ ತರಬೇತಿ ನೀಡುವಂತೆ ಇಲಾಖೆಯೊಂದಿಗೆ ಸಮನ್ವಯ ಸಾಧಿಸುವುದು ಸೇರಿದಂತೆ ವಿವಿಧ ಶಾಲೆಗಳ ಶಾಲಾಭಿವೃದ್ಧಿ ಸಮಿತಿಯವರು ಕೈಗೊಂಡ ಉತ್ತಮ ಕಾರ್ಯಕ್ರಮಗಳ ಕುರಿತು ಮಾಸ ಪತ್ರಿಕೆ ಹೊರತರಲು ಸಹ ಅಭಿಪ್ರಾಯ ವ್ಯಕ್ತವಾಯಿತು.

ಎಸ್‌ಡಿಎಮ್ಸಿ ಅಧ್ಯಕ್ಷರು ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪುಸ್ತಕವನ್ನು ಹೊರತರುವುದು, ಪ್ರತಿ ತರಗತಿಗಳಿಗೆ ವಿಷಯವಾರು ಶಿಕ್ಷಕರನ್ನು ನೇಮಿಸಬೇಕೆಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವುದು, ಶಾಲೆಗಳು ಪ್ರಾರಂಭವಾಗುವ ಶೈಕ್ಷಣಿಕ ವರ್ಷದ ಆರಂಭದಲ್ಲೇ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳನ್ನು ತಲುಪಲೇ ಬೇಕು ಎಂಬ ಗುರಿ ಸಾಧಿಸಲು ಸರ್ಕಾರದೊಂದಿಗೆ ಪ್ರಯತ್ನ ನಡೆಸುವುದು.

ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ ಶಿಕ್ಷಕರನ್ನು ವರ್ಗಾವಣೆ ಮಕ್ಕಳ ಹಿತದೃಷ್ಟಿಯಿಂದ ಒಳಿತಲ್ಲ ಎಂಬುದನ್ನು ಸರ್ಕಾರಕ್ಕೆ ಗಮನಕ್ಕೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವ ಕುರಿತು ಚರ್ಚಿಸಿದರು.

ಈ ವೇಳೆ ಮಾತನಾಡಿದ ಸುರೇಶ್ ಕುಮಾರ್, ಶಿಕ್ಷಕರು ಮತ್ತು ಎಸ್‌ಡಿಎಮ್ಸಿ ಸಿಬ್ಬಂದಿ ತಮ್ಮ ನಡುವೆ ಸಮನ್ವಯವನ್ನು ಸಾಧಿಸಿದಲ್ಲಿ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗುವುದು. ಆದ್ದರಿಂದ ನಿಮ್ಮ ನಡುವಿನ ಸಂಘರ್ಷವನ್ನು ತೊರೆದು ಸಮನ್ವಯ ಸಾಧಿಸಕೊಳ್ಳಿ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಚರ್ಚೆಯಾದ ಅಭಿಪ್ರಾಯಗಳ ಮೇಲೆ ಹಾಗೂ ವಿವಿಧ ವಿಚಾರಗಳ ಕುರಿತು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಕೂಲಂಕಷವಾಗಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರುತ್ತೇನೆ ಎಂದು ಮಾಜಿ ಸಚಿವ ಎಸ್.ಸುರೇಶ್‌ಕುಮಾರ್ ತಿಳಿಸಿದರು.

ಸಂಸದರು, ಶಾಸಕರು, ಪರಿಷತ್ ಸದಸ್ಯರು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವಂತೆ ಪತ್ರ ಬರೆದು ಕೋರುತ್ತೇನೆ. ಈ ಬಾರಿಯ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರಿ ಶಾಲೆಗಳ ಸಮಸ್ಯೆ ಕುರಿತು ಗಟ್ಟಿಯಾಗಿ ಧ್ವನಿ ಎತ್ತುತ್ತೇನೆ. -ಸುರೇಶ್ ಕುಮಾರ್, ಶಾಸಕ, ಮಾಜಿ ಶಿಕ್ಷಣ ಸಚಿವ.