ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸುರಕ್ಷಿತ ವಾತಾವರಣ ನಿರ್ವಿುಸುವುದು ಜಿಲ್ಲಾ ಆಡಳಿತಗಳ ಹೊಣೆಗಾರಿಕೆ ಯಾಗಿದ್ದು, ಕರೊನಾ ಸೇನಾನಿಗಳಿಗೆ ನೇತೃತ್ವವಹಿಸಿದ ರೀತಿಯಲ್ಲಿ ಸುಗಮ ಪರೀಕ್ಷೆ ನಿರ್ವಹಣೆಗೂ ಸಾಥ್ ನೀಡಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸಲಹೆ ನೀಡಿದರು.
ವಿಕಾಸಸೌಧದಲ್ಲಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ಎಸ್ಪಿ, ಜಿಲ್ಲಾ ಮತ್ತು ತಾಲೂಕು ಖಜಾನೆ ಅಧಿಕಾರಿಗಳು, ಡಿಡಿಪಿಐ, ಬಿಇಒರೊಂದಿಗೆ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು ಕರೊನಾ ಕಾಲಘಟ್ಟದಲ್ಲಿ ಹಾಗೂ ಹೈಕೋರ್ಟ್ ಕಣ್ಗಾವಲಿನಲ್ಲಿ ಜೂ.25ರಿಂದ ನಡೆಯತ್ತಿರುವ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಸುಗಮ ನಿರ್ವಹಣೆಯನ್ನು ಜಿಲ್ಲಾಡಳಿತಗಳು ಸವಾಲು ಮತ್ತು ಅವಕಾಶಗಳೆಂದು ಭಾವಿಸಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ಸೂಚಿಸಿದರು.
ಸಹಾಯವಾಣಿ ಪ್ರಾರಂಭಿಸಲು ಸೂಚನೆ: ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೂಡಲೇ ಸಹಾಯವಾಣಿ ಪ್ರಾರಂಭಿಸಿ ಈ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು. ಕೊನೇ ಸಂದರ್ಭದಲ್ಲಿ ಕಂಟೇನ್ವೆುಂಟ್ ವಲಯಗಳಾಗಿ ಘೊಷಿತವಾದರೆ ತಕ್ಷಣದ ಅನುಕೂಲಕ್ಕಾಗಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಬದಲಿ ಐದು ಕೇಂದ್ರಗಳನ್ನು ಗುರುತಿಸಿ ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ಸೂಚಿಸಿದರು. ಪ್ರಾಥಮಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಸಾಶಿಇ ಆಯುಕ್ತ ಡಾ. ಕೆ.ಜಿ.ಜಗದೀಶ್, ಎಸ್ಎಸ್ಎ ಎಸ್ಪಿಡಿ ಡಾ. ಎಂ.ಟಿ. ರೇಜು ಸೇರಿದಂತೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ವದಂತಿಕೋರರ ವಿರುದ್ಧ ಕ್ರಮ: ಕೆಲ ಪಟ್ಟಭದ್ರ ಹಿತಾಸಕ್ತಿಗಳು, ಪರೀಕ್ಷೆ ವಿರೋಧಿಗಳು, ವದಂತಿ ಕೋರರಂತಹ ವ್ಯಕ್ತಿಗಳು ಪರೀಕ್ಷೆ ಕುರಿತಂತೆ ಮಕ್ಕಳಲ್ಲಿ ಗೊಂದಲ ಮೂಡಿಸುವ ಸಾಧ್ಯತೆಗಳಿರುವುದರಿಂದ ಅಂತಹವರನ್ನು ಗಮನಿಸಿ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಹೀಗಾಗಿ ಪರೀಕ್ಷಾ ಕೇಂದ್ರ ಮತ್ತು ಉತ್ತರ ಪತ್ರಿಕೆಗಳ ಸಂಗ್ರಹಣಾ ಕೇಂದ್ರಗಳನ್ನು ಚುನಾವಣಾ ಸ್ಟ್ರಾಂಗ್ ರೂಮ್ಳಿಗೆ ಕೈಗೊಳ್ಳುವ ಎಲ್ಲ ಕ್ರಮಗಳನ್ನೂ ಕೈಗೊಳ್ಳ ಬೇಕೆಂದು ಡಿಸಿ, ಎಸ್ಪಿಗಳಿಗೆ ಸುರೇಶ್ ಕುಮಾರ್ ಸೂಚಿಸಿದರು.
ಮಕ್ಕಳಿಗೆ ಟ್ಯೂಶನ್, ಶಾಲೆ ಪರವಾನಗಿ ರದ್ದು
ಶಾಲೆ ಆರಂಭಿಸಬೇಕೋ ಬೇಡವೇ ಎಂಬ ವಾದ-ವಿವಾದ ನಡೆಯುತ್ತಿರುವ ಬೆನ್ನಲ್ಲೇ ಶಿಕ್ಷಣ ಸಂಸ್ಥೆಯೊಂದರ ಆವರಣದಲ್ಲಿರುವ ಮನೆಯಲ್ಲಿ ಮುಖ್ಯಾಧ್ಯಾಪಕಿಯೊಬ್ಬರು ಮಕ್ಕಳನ್ನು ಸೇರಿಸಿಕೊಂಡು ಟ್ಯೂಷನ್ ಹೇಳಿದ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ರಹೀಂ ನಗರದ ರೋಸ್ಲೈನ್ ಶಾಲೆ ಆವರಣದಲ್ಲಿರುವ ಮನೆಯಲ್ಲಿ ಗುರುವಾರ ಮುಖ್ಯಾಧ್ಯಾಪಕಿ ಎಸ್.ಎ. ಕೆಂಭಾವಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು. ಕರೊನಾ ನಿಯಮ ಉಲ್ಲಂಘಿಸಿದ ಆಧಾರದ ಮೇಲೆ ಶಾಲೆ ಪರವಾನಗಿ ರದ್ದುಗೊಳಿಸುತ್ತಿರುವುದಾಗಿ ಬಿಇಒ ನದಾಫ್ ‘ವಿಜಯವಾಣಿ’ಗೆ ತಿಳಿಸಿದರು.