ಸುಮ್ನೆ ತಮಾಷೆಗೆ ಸ್ಕ್ರಿಪ್ಟ್ ಪೂಜೆ
"ಕಡಲ ತೀರದ ಭಾರ್ಗವ', "ಕೆಂದಾವರೆ' ಚಿತ್ರಗಳ ನಿರ್ದೇಶಕ ಪನ್ನಗ ಮತ್ತು "ಯಾವ ಮೋಹನ ಮುರಳಿ ಕರೆಯಿತು' ಸಿನಿಮಾ ನಿರ್ದೇಶಿಸಿದ್ದ ವಿಶ್ವಾಸ್ ಕೃಷ್ಣ ಇಬ್ಬರೂ ಸೇರಿ ಇದೀಗ ನಿರ್ಮಾಪಕರಾಗಿ ಭಡ್ತಿ ಪಡೆದಿದ್ದಾರೆ. ಚಿತ್ರದ ಹೆಸರು "ಸುಮ್ನೆ ತಮಾಷೆಗೆ'. ಪನ್ನಗ ಮತ್ತು ವಿಶ್ವಾಸ್ ತಂಡದಲ್ಲಿದ್ದ ಘಟಕಲ ಸುರೇಶ್ ಬಾಬು ಈ ಔಟ್ ಆ್ಯಂಡ್ ಔಟ್ ಸೋಷಿಯೊ ಕಾಮಿಡಿ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ಧರಿಸಲಿದ್ದಾರೆ. ಇತ್ತೀಚೆಗಷ್ಟೆ ಜೆಪಿನಗರದ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಚಿತ್ರದ ಸ್ಕ್ರಿಪ್ಟ್ ಪೂಜೆ ನಡೆಸಲಾಗಿದ್ದು, ಇದೇ ಜುಲೈ ಅಥವಾ ಆಗಸ್ಟ್ನಲ್ಲಿ ಸಿನಿಮಾ ಚಿತ್ರೀಕರಣ ಪ್ರಾರಂಭಿಸುವ ಪ್ಲ್ಯಾನ್ ಚಿತ್ರತಂಡದ್ದು.
"ಕಡಲ ತೀರದ ಭಾರ್ಗವ', "ಯಾವ ಮೋಹನ ಮುರಳಿ ಕರೆಯಿತು' ಹಾಗೂ "ಪೀಟರ್' ಸಿನಿಮಾಗಳಲ್ಲಿ ನಟಿಸಿರುವ ಪಟೇಲ್ ವರುಣ್ ರಾಜು "ಸುಮ್ನೆ ತಮಾಷೆಗೆ' ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದು, ಯುವ ಪ್ರತಿಭೆಗಳಾದ ಹರೀಶ್, ದರ್ಶನ್, ಮಾಧವ ತಾರಾಗಣದಲ್ಲಿದ್ದಾರೆ. ಉಳಿದಂತೆ ಸಾಮ್ರಾಟ್ ಸಂಗೀತ, ಪುನೀತ್ ಓಂಕಾರ್ ಸಾಹಸ ನಿರ್ದೇಶನದಲ್ಲಿ ಸಿನಿಮಾ ಮೂಡಿಬರಲಿದೆ. ಚಿತ್ರದ ಬಗ್ಗೆ ನಿರ್ಮಾಪಕ ಪನ್ನಗ, "ಗೆಳೆಯರೇ ಸೇರಿ ಮಾಡುತ್ತಿರುವ ಚಿತ್ರವಿದು. ನಿರ್ಮಾಪಕನಾಗಿ ಈಗ ಜವಾಬ್ದಾರಿ ಹೆಚ್ಚಿದೆ. ಕರೊನಾ ಸಮಯದಲ್ಲಿ ಗೆಳೆಯರೆಲ್ಲರೂ ಕುಳಿತು ಚರ್ಚಿಸುತ್ತಿದ್ದಾಗ, ಐದಾರು ಜನ ಕುಳಿತು ಪ್ರಪಂಚದ ಸಮಸ್ಯೆಗಳ ಬಗ್ಗೆ ಮಾತನಾಡುವುದನ್ನೇ ಸಿನಿಮಾ ಮಾಡಿದರೆ ಹೇಗೆ? ಅಂತ ಅನ್ನಿಸಿತು. "ಕೆಂದಾವರೆ', "ಕಡಲ ತೀರದ ಭಾರ್ಗವ' ಚಿತ್ರಗಳಲ್ಲಿ ಗಂಭೀರ ವಿಷಯಗಳನ್ನು ಹೇಳಿದ್ದೆವು. ಹೀಗಾಗಿ ಸೀರಿಯಸ್ ವಿಚಾರಗಳನ್ನು ಈ ಬಾರಿ ಹಾಸ್ಯದ ಮೂಲಕ ಹೇಳಲು ತೀರ್ಮಾನಿಸಿದೆವು. ಆಗ ಹೊಳೆದಿದ್ದೇ "ಸುಮ್ನೆ ತಮಾಷೆಗೆ' ಶೀರ್ಷಿಕೆ. ಈ ಚಿತ್ರದ ಮೂಲಕ ನಗಿಸುತ್ತಲೇ ಉತ್ತಮ ಸಂದೇಶಗಳನ್ನು ನೀಡುವ ಪ್ರಯತ್ನ ಮಾಡಲಿದ್ದೇವೆ' ಎಂದು ಮಾಹಿತಿ ನೀಡುತ್ತಾರೆ.