ನವದೆಹಲಿ: ಆಧಾರ್ ಸಂಖ್ಯೆ ಜೋಡಣೆಯಾಗಿಲ್ಲ ಎಂಬ ಕಾರಣಕ್ಕೆ ಮೂರು ಕೋಟಿ ಪಡಿತರ ಫಲಾನುಭವಿಗಳ ರೇಷನ್ ಕಾರ್ಡ್ ರದ್ದು ಮಾಡಿರುವುದು ಗಂಭೀರ ಮತ್ತು ಕಳವಳಕಾರಿ ವಿಷಯ ಎಂದಿರುವ ಸುಪ್ರೀಂಕೋರ್ಟ್, ಈ ಬಗ್ಗೆ ನಾಲ್ಕು ವಾರದಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಮತ್ತು ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.
ರೇಷನ್ ಕಾರ್ಡ್ ರದ್ದು ಮಾಡಿರುವುದನ್ನು ಪ್ರಶ್ನಿಸಿರುವುದು ಬರೀ ಪ್ರತಿರೋಧದ ದಾವೆಯಲ್ಲ. ಇದು ತುಂಬ ಕಳವಳಕಾರಿ ವಿಷಯ. ಇಂಥ ಅರ್ಜಿಯನ್ನು ಮೊದಲು ಸಂಬಂಧಿಸಿದ ಹೈಕೋರ್ಟ್ಗೆ ಸಲ್ಲಿಸಬೇಕಿತ್ತು. ಆದರೂ ಈ ಅರ್ಜಿಯ ವಿಚಾರಣೆಯನ್ನು ಇನ್ನೊಂದು ದಿನ ನಡೆಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ.
3 ಕೋಟಿ ಪಡಿತರ ಚೀಟಿ ರದ್ದತಿಯ ಪರಿಣಾಮ ಗಹನವಾಗಿದೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು. ಇದಕ್ಕೆ ಉತ್ತರ ನೀಡಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅಮನ್ ಲೇಖಿ, ಕೇಂದ್ರ ಸರ್ಕಾರ ರೇಷನ್ ಕಾರ್ಡ್ ರದ್ದು ಮಾಡಿದೆ ಎನ್ನುವುದು ತಪ್ಪಾಗುತ್ತದೆ. ಈ ವಿಷಯದಲ್ಲಿ ಸರ್ಕಾರ ಈಗಾಗಲೇ ಪ್ರತಿಕ್ರಿಯೆ ದಾಖಲಿಸಿದೆ ಎಂದರು. ಆಧಾರ್ ವಿಷಯವೂ ಈ ಪ್ರಕರಣದಲ್ಲಿ ಇರುವ ಕಾರಣ ಕೇಂದ್ರ ತನ್ನ ಅನಿಸಿಕೆ ತಿಳಿಸಬೇಕು ಎಂದು ಕೋರ್ಟ್ ಹೇಳಿದೆ.
ಆಧಾರ್ ಕಾರ್ಡ್ ಹೊಂದಿಲ್ಲವೆಂಬ ಕಾರಣಕ್ಕೆ ಪಡಿತರ ಪೂರೈಕೆಯಿಂದ ವಂಚಿತರಾದ ಜನರು ಸಾವನ್ನಪ್ಪಿರುವ ಕುರಿತ ಅರ್ಜಿಯನ್ನು ಸುಪ್ರೀಂಕೋರ್ಟ್ 2019ರ ಡಿಸೆಂಬರ್ನಲ್ಲಿ ವಿಚಾರಣೆ ನಡೆಸಿದಾಗ ಕೇಂದ್ರ ಸರ್ಕಾರ ಪ್ರತಿಕ್ರಿಯೆ ದಾಖಲಿಸಿತ್ತು. ನ್ಯಾಯಬೆಲೆ ಅಂಗಡಿ ಮೂಲಕ ಪಡಿತರ ಸಿಗಲಿಲ್ಲವೆಂದು ಜನರು ಮರಣಿಸಿಲ್ಲ ಎಂದು ಹೇಳಿತ್ತು. ಅದನ್ನೇ ಹೆಚ್ಚುವರಿ ಸಾಲಿಸಿಟರ್ ಜನರಲ್ ಈಗ ನ್ಯಾಯಪೀಠದ ಗಮನಕ್ಕೆ ತಂದರು.