ನ್ಯೂಸ್

ಅಕ್ರಮ ಸಂಬಂಧ, ಮಹಿಳೆಗೆ ಸುಪ್ರೀಂ ಕೋರ್ಟ್ ತರಾಟೆ

ನವದೆಹಲಿ: ವಿವಾಹಿತ ಮಹಿಳೆಯೊಬ್ಬಳು ವಿವಾಹೇತರ ಲೈಂಗಿಕ ಸಂಬಂಧ ಇಟ್ಟುಕೊಂಡಿರುವುದು; ಹಾಗೂ ತನ್ನ ಪ್ರಿಯಕರ ಮದುವೆಯಾಗುವುದಾಗಿ ವಂಚಿಸಿದ್ದಾನೆಂದು ಆರೋಪಿಸಿರುವ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅರ್ಜಿದಾರ ಮಹಿಳೆಯನ್ನೇ ತರಾಟೆಗೆ ತೆಗೆದುಕೊಂಡ ವಿದ್ಯಮಾನ ಬುಧವಾರ ನಡೆದಿದೆ. ಇದಕ್ಕಾಗಿ ನಿಮ್ಮನ್ನೇ ಶಿಕ್ಷೆಗೆ ಗುರಿಪಡಿಸ ಬೇಕಾದೀತೆಂದೂ ಮಹಿಳೆಗೆ ಕೋರ್ಟ್ ಎಚ್ಚರಿಕೆ ನೀಡಿದೆ.

ಮದುವೆಯಾಗುವುದಾಗಿ ನಂಬಿಸಿ ತನ್ನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಪ್ರಿಯತಮನಿಗೆ ಮಂಜೂರಾಗಿರುವ ಜಾಮೀನನ್ನು ರದ್ದುಪಡಿಸುವಂತೆ ಕೋರಿ ಮಹಿಳೆ ಕೋರ್ಟ್ ಮೆಟ್ಟಿಲೇರಿದ್ದಳು. ಮದುವೆ ಇನ್ನೂ ಸಿಂಧುವಾಗಿರುವಾಗ ತನ್ನ ಪತಿಯಲ್ಲದೆ ಪರಪುರುಷನೊಂದಿಗೆ ದೈಹಿಕ ಸಂಬಂಧ ಹೊಂದಿದ್ದಕ್ಕಾಗಿ ಮಹಿಳೆಯನ್ನೇ ಶಿಕ್ಷಿಸಬೇಕಾಗಬಹುದು ಎಂದು ಸವೋನ್ನತ ನ್ಯಾಯಾಲಯ ಎಚ್ಚರಿಕೆ ಕೊಟ್ಟಿತು. ‘ನೀವು ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ನೀವೊಬ್ಬ ಪಕ್ವ ವ್ಯಕ್ತಿಯಾಗಿದ್ದೀರಿ ಹಾಗೂ ವಿವಾಹದ ಹೊರಗಿನ ಸಂಬಂಧದಿಂದ ಏನಾಗಬಹುದು ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬಲ್ಲಿರಿ’ ಎಂದು ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಇದ್ದ ಪೀಠ ಮಹಿಳೆಗೆ ಹೇಳಿತು.