ಮುಂಬೈ: ಹೊಂದಾಣಿಕೆಯ ಒಟ್ಟು ಆದಾಯ(ಎಜಿಆರ್) ಬಾಕಿಗೆ ಸಂಬಂಧಿಸಿದಂತೆ ಈ ಹಿಂದೆ ನೀಡಿದ ತೀರ್ಪನ್ನು ಮರುಪರಿಶೀಲಿಸುವಂತೆ ಸಲ್ಲಿಸಿದ ಅರ್ಜಿಯ ಮೇಲೆ ಸುಪ್ರೀಂ ಕೋರ್ಟ್ ಟೆಲಿಕಾಂ ಕಂಪನಿಗಳಿಗೆ ಆಘಾತ ನೀಡಿದೆ.
ಅರ್ಜಿಯನ್ನು ವಿಚಾರಣೆಗೆ ತಿರಸ್ಕರಿಸಲಾಗಿದೆ. ಎಜಿಆರ್ ಬಾಕಿ ಲೆಕ್ಕಾಚಾರದಲ್ಲಿ ತಪ್ಪುಗಳಾಗಿವೆ ಎಂದು ಆಯಾ ಕಂಪನಿಗಳು ವಾದಿಸುತ್ತಿರುವಾಗಲೇ, ಕ್ಯುರೇಟಿವ್ ಅರ್ಜಿಯ ವಿಚಾರಣೆಗೆ ಪೀಠ ಗುರುವಾರ ಒಪ್ಪಲಿಲ್ಲ. ಇದರ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ವೊಡಾಫೋನ್-ಐಡಿಯಾ ಕಂಪನಿಯ ಷೇರುಗಳು ಶೇ. 15ರಿಂದ 20ರಷ್ಟು ಕುಸಿತ ಕಂಡವು.
ದೇಶೀಯ ಷೇರು ಮಾರುಕಟ್ಟೆ ಸೂಚ್ಯಂಕಗಳು ಹೊಸ ಗರಿಷ್ಠ ಮಟ್ಟವನ್ನು ತಲುಪಿದವು. ಆದರೆ ಕೆಲವು ಪ್ರಮುಖ ಕಂಪನಿಗಳ ಷೇರುಗಳು ಕುಸಿಯುತ್ತಿವೆ. ಬಜಾಜ್ ಹೌಸಿಂಗ್ ಫೈನಾನ್ಸ್ ಷೇರುಗಳು ಸತತವಾಗಿ ಕುಸಿಯುತ್ತಿದ್ದು, ತೀರ್ಪು ಪ್ರಕಟವಾದ ಬಳಿಕ ವೊಡಾಫೋನ್, ಐಡಿಯಾ ಷೇರುಗಳು ಋಣಾತ್ಮಕವಾಗಿ ವಹಿವಾಟು ನಡೆಸಿದವು.
ಕಳೆದ ವರ್ಷ ಸುಪ್ರೀಂ ಕೋರ್ಟ್ ನೀಡಿದ ಆದೇಶಗಳ ವಿರುದ್ಧ ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ ಮತ್ತು ಇತರ ಕಂಪನಿಗಳು 2019 ರಲ್ಲಿ ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸಿವೆ. ಮುಕ್ತ ನ್ಯಾಯಾಲಯದಲ್ಲಿ ನಿರ್ಧಾರ ಪ್ರಕಟಿಸುವಂತೆ ಕೋರಿದ್ದವು.
ಎಜಿಆರ್ ಬಾಕಿಗಳ ಲೆಕ್ಕಾಚಾರದಲ್ಲಿ ದೊಡ್ಡ ತಪ್ಪು ಮಾಡಲಾಗಿದೆ ಎಂದು ಈ ಕಂಪನಿಗಳು ಹೇಳುತ್ತವೆ. ಕಳೆದ ವರ್ಷ ಅವರು ತಮ್ಮ ಅರ್ಜಿಯನ್ನು ಮುಕ್ತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವಂತೆ ನ್ಯಾಯಾಲಯವನ್ನು ಕೋರಿದ್ದವು. ನ್ಯಾಯಮೂರ್ತಿ ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು ಗುರುವಾರ ಈ ಕ್ಯುರೇಟಿವ್ ಅರ್ಜಿಯನ್ನು ತಿರಸ್ಕರಿಸಿತು.