Supreme Court: ತಮಿಳುನಾಡಿನ ಡಿಎಂಕೆ ಸರ್ಕಾರ ಕಲ್ಯಾಣ ಯೋಜನೆಗಳಲ್ಲಿ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳ ಹೆಸರು, ಛಾಯಚಿತ್ರಗಳನ್ನು ಬಳಸಬಾರದು ಎಂದು ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಬುಧವಾರ(ಆಗಸ್ಟ್ 6) ಸುಪ್ರೀಂಕೋರ್ಟ್ ರದ್ದುಗೊಳಿಸಿದೆ.
ತಮಿಳುನಾಡಿನ ಕಲ್ಯಾಣ ಯೋಜನೆಗಳಲ್ಲಿ ಸಿಎಂ ಹೆಸರು, ಛಾಯಚಿತ್ರ ಬಳಸುವುದರ ವಿರುದ್ಧದ ಅರ್ಜಿ ಅನಗತ್ಯ ಮತ್ತು ಕಾನೂನು ಪ್ರಕ್ರಿಯೆಯ ದುರುಪಯೋಗ ಎಂದು ಹೇಳಿದ ಸುಪ್ರೀಂ ಕೋರ್ಟ್, ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಕ್ಕಾಗಿ ಎಐಎಡಿಎಂಕೆ ನಾಯಕ ಸಿ.ವಿ.ಷಣ್ಮುಗಂ ಅವರಿಗೆ 10 ಲಕ್ಷ ರೂ. ದಂಡ ವಿಧಿಸಿದೆ.
ಪ್ರಕರಣದ ಹಿನ್ನೆಲೆ
ತಮಿಳುನಾಡಿನಲ್ಲಿ ಆಡಳಿತ ಮಾಡ್ತಿರುವ ಡಿಎಂಕೆ ಸರ್ಕಾರ ಉಂಗಲುಡನ್ ಸ್ಟಾಲಿನ್(ನಿಮ್ಮೊಂದಿಗೆ ಸ್ಟಾಲಿನ್) ಎಂಬ ಸಾರ್ವಜನಿಕ ಸಂಪರ್ಕದ ಕಾರ್ಯಕ್ರಮವನ್ನು ಶುರು ಮಾಡಿತ್ತು. ಇದಕ್ಕೆ ಸಿಎಂ ಸ್ಟಾಲಿನ್, ದಿವಂಗತ ಮಾಜಿ ಸಿಎಂಗಳಾದ ಎಂ.ಕರುಣಾನಿಧಿ, ಅಣ್ಣಾದೊರೆ ಸೇರಿ ದ್ರಾವಿಡ ಚಳುವಳಿಯ ನೇತಾರರ ಫೋಟೋಗಳನ್ನು ಬಳಸಲಾಗಿತ್ತು.
ಕಾರ್ಯಕ್ರಮದ ಜಾಹೀರಾತಿನಲ್ಲಿ ಹಾಲಿ ಮತ್ತು ಸಿಎಂ ಹೆಸರು ಫೋಟೋ ಬಳಕೆ ಸ್ಥಾಪಿತ ಮಾನದಂಡಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಎಐಎಡಿಎಂಕೆ ನಾಯಕ ಸಿ.ವಿ.ಷಣ್ಮುಗಂ ಮದ್ರಾಸ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಜುಲೈ 31 ರಂದು ಷಣ್ಮುಗಂ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ಸುಂದರ್ ಮೋಹನ್ ಅವರಿದ್ದ ವಿಭಾಗೀಯ ಪೀಠವು ತಮಿಳುನಾಡು ಸರ್ಕಾರವು ಯಾವುದೇ ಹೊಸ ಅಥವಾ ಮರುನಾಮಕರಣಗೊಂಡ ಸಾರ್ವಜನಿಕ ಕಲ್ಯಾಣ ಯೋಜನೆಗಳಿಗೆ ಜೀವಂತ ವ್ಯಕ್ತಿಗಳ ಹೆಸರಿಡುವುದನ್ನು ನಿರ್ಬಂಧಿಸಿ ಆದೇಶ ನೀಡಿತು.
ಜೊತೆಗೆ ಅಂತಹ ಯೋಜನೆಗಳ ಜಾಹೀರಾತುಗಳಲ್ಲಿ ಮಾಜಿ ಮುಖ್ಯಮಂತ್ರಿಗಳು, ಸೈದ್ಧಾಂತಿಕ ನಾಯಕರ ಭಾವಚಿತ್ರ ಅಥವಾ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಲಾಂಛನ ಬಳಸುವುದಕ್ಕೂ ನಿಷೇಧ ಹೇರಿತ್ತು. ಈ ಆದೇಶ ರಾಜ್ಯದ ಯಾವುದೇ ಕಲ್ಯಾಣ ಯೋಜನೆಗಳನ್ನು ಪ್ರಾರಂಭಿಸುವುದು, ಕಾರ್ಯಗತಗೊಳಿಸುವುದು ಅಥವಾ ನಿರ್ವಹಿಸುವುದನ್ನು ತಡೆಯುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದರೂ, ನಿರ್ಬಂಧ ಯೋಜನೆಗಳಿಗೆ ಸಂಬಂಧಿಸಿದ ನಾಮಕರಣ ಮತ್ತು ಪ್ರಚಾರದ ವಿಷಯಗಳಿಗೆ ಮಾತ್ರ ಅನ್ವಯಿಸುತ್ತವೆ ಎಂದು ಹೇಳಿತ್ತು. (ಏಜೆನ್ಸೀಸ್)