ನವದೆಹಲಿ: ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಾಗುವ ಪ್ರತಿ ಪ್ರಕರಣದಲ್ಲೂ ಪ್ರಾಥಮಿಕ ತನಿಖೆ ನಡೆಸುವುದು ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕೆಲವು ವರ್ಗದ ಕೇಸ್ಗಳಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಪ್ರಾಥಮಿಕ ತನಿಖೆ ಕಡ್ಡಾಯವಲ್ಲ. ಪ್ರಾಥಮಿಕ ತನಿಖೆಯ ಉದ್ದೇಶವು ಸಂಗ್ರಹಿಸಿದ ಮಾಹಿತಿಯ ಸತ್ಯಾಸತ್ಯತೆ ಪರಿಶೀಲಿಸುವುದಲ್ಲ. ಮಾಹಿತಿಯು ಅಪರಾಧವನ್ನು ಬಹಿರಂಗಪಡಿಸುತ್ತದೆಯೇ? ಎಂಬುದನ್ನು ನಿರ್ಧರಿಸುವುದಾಗಿದೆ. ತನಿಖಾಧಿಕಾರಿಯು ವಿವರವಾದ ಮತ್ತು ಸಮಂಜಸವಾದ ಮಾಹಿತಿ, ವರದಿಯನ್ನು ಹೊಂದಿದ್ದರೆ, ಅದು ಅಪರಾಧವನ್ನು ಬಹಿರಂಗಪಡಿಸುತ್ತಿದ್ದರೆ ಪ್ರಾಥಮಿಕ ತನಿಖೆಯ ಅಗತ್ಯ ಇಲ್ಲ ಎಂದು ನ್ಯಾ. ದೀಪಂಕರ ದತ್ತ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಹೇಳಿದೆ.
ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮನವಿಯ ಮೇಲೆ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ. ಸರ್ಕಾರಿ ಅಧಿಕಾರಿಯ ವಿರುದ್ಧ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ ಅನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಸರ್ಕಾರಿ ಅಧಿಕಾರಿಯು ತನ್ನ ಆದಾಯಕ್ಕಿಂತ ಅಧಿಕ ಆಸ್ತಿಗಳನ್ನು ಸಂಪಾದಿಸಿದ್ದಾನೆ ಎಂದು ಆರೋಪಿಸಲಾಗಿತ್ತು. ಆತನ ವಿರುದ್ಧ ಪ್ರಾಥಮಿಕ ತನಿಖೆ ನಡೆಸದೇ ಪ್ರಕರಣ ದಾಖಲಿಸಿರುವ ಕಾರಣ ಹೈಕೋರ್ಟ್ ಎಫ್ಐಆರ್ ವಜಾ ಮಾಡಿತ್ತು. ಇದರ ವಿರುದ್ಧ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಈಗ ಕರ್ನಾಟಕ ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್, ಪ್ರಕರಣದ ತನಿಖೆಗೆ ಅವಕಾಶ ಮಾಡಿಕೊಟ್ಟಿದೆ.