ನ್ಯೂಸ್

ಮಹಾ ಕಗ್ಗಂಟು: ವಿಶ್ವಾಸಮತ ಸಾಬೀತುಪಡಿಸಲು ಠಾಕ್ರೆ ಸರ್ಕಾರಕ್ಕೆ ಸುಪ್ರೀಂ ಸೂಚನೆ..

ಮುಂಬೈ: ಕಳೆದ ಕೆಲವು ದಿನಗಳಿಂದ ದೇಶದ ಗಮನ ಸೆಳೆದಿರುವ ಮಹಾರಾಷ್ಟ್ರ ರಾಜಕಾರಣ ಮಹಾ ಕಗ್ಗಂಟಾಗಿರುವ ಬೆನ್ನಿಗೇ ಮತ್ತಷ್ಟು ಕುತೂಹಲ ಕೆರಳಿಸಿದೆ. ಏಕೆಂದರೆ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರಕ್ಕೆ ವಿಶ್ವಾಸಮತ ಸಾಬೀತುಪಡಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಈ ಮೂಲಕ ಠಾಕ್ರೆ ಸರ್ಕಾರಕ್ಕೆ ನಾಳೆ ಮತ್ತೊಂದು ಸವಾಲು ಎದುರಾಗಿದೆ.

ಮುಖ್ಯಮಂತ್ರಿ ಉದ್ಧವ್​ ಠಾಕ್ರೆಗೆ ವಿಶ್ವಾಸಮತ ಯಾಚನೆಗೆ ಸೂಚಿಸಿ ಮಹಾರಾಷ್ಟ್ರ ರಾಜ್ಯಪಾಲರು ನಿರ್ದೇಶನ ನೀಡಿದ್ದನ್ನು ಪ್ರಶ್ನಿಸಿ ಶಿವಸೇನೆಯ ಮುಖ್ಯಸ್ಥ ಸುನೀಲ್​ ಪ್ರಭು ಸಲ್ಲಿಸಿದ್ದ ಅರ್ಜಿಯ ಸುದೀರ್ಘ ವಿಚಾರಣೆ ಬಳಿಕ ಸುಪ್ರೀಂಕೋರ್ಟ್ ಈ ಸೂಚನೆ ನೀಡಿದೆ. ಹೀಗಾಗಿ ನಾಳೆಯ ಅಧಿವೇಶನದಲ್ಲಿ ಠಾಕ್ರೆ ಸರ್ಕಾರ ವಿಶ್ವಾಸಮತ ಸಾಬೀತುಪಡಿಸಬೇಕಾಗಿದೆ.

ಬಂಡಾಯ ನಾಯಕ ಶಿವಸೇನೆಯ ಏಕನಾಥ್ ಶಿಂಧೆ ಪರವಾಗಿ ಹಾಜರಿದ್ದ ಹಿರಿಯ ವಕೀಲ ನೀರಜ್ ಕಿಶನ್ ಕೌಲ್, ಕುದುರೆ ವ್ಯಾಪಾರ ತಡೆಯುವಲ್ಲಿ ಮತ್ತು ರಾಜಕೀಯ ಬದ್ಧತೆ ಖಚಿತಪಡಿಸಲು ವಿಶ್ವಾಸಮತ ಸಾಬೀತುಪಡಿಸುವುದೊಂದೇ ಮಾರ್ಗ, ಈ ವಿಷಯದಲ್ಲಿ ವಿಳಂಬ ಸಲ್ಲದು ಎಂದು ವಾದ ಮಂಡಿಸಿದ್ದರು.