ಬೆಂಗಳೂರು: ( sudeep ) ಬೀದಿನಾಯಿಗಳನ್ನು ಸ್ಥಳಾಂತರಿಸುವ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಬಗ್ಗೆ ದೇಶದಾದ್ಯಂತ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ಸಿನಿಮಾ- ನಟ, ನಟಿಯರು ಸೋಶಿಯಲ್ ಮೀಡಿಯಾದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ಹೆಚ್ಚಾದ ನಾಯಿ ದಾಳಿ ಪ್ರಕರಣವನ್ನು ಗಮನಿಸಿ ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದು ಸುಪ್ರೀಂಕೋರ್ಟ್, ಆಗಸ್ಟ್ 11 ರಂದು ಆದೇಶವೊಂದನ್ನು ಪ್ರಕಟಿಸಿದೆ. ದೆಹಲಿ ಸರ್ಕಾರವು, ದೆಹಲಿಯಲ್ಲಿರುವ ಎಲ್ಲ ಬೀದಿನಾಯಿಗಳನ್ನು ಸ್ಥಳಾಂತರಗೊಳಿಸಿ ಅವುಗಳಿಗೆ ನೆಲೆ ಕಲ್ಪಿಸಬೇಕು ಎಂದಿದೆ. ಸಿಎಂ ರೇಖಾ ಗುಪ್ತಾ ಅವರು, ಸುಪ್ರೀಂ ಆದೇಶವನ್ನು ಪಾಲಿಸುವುದಾಗಿ ಹೇಳಿದ್ದಾರೆ.
ಪ್ರಕರಣ ಏನು?:
ಸುದೀಪ್ ಟ್ವೀಟ್ ಮಾಡಿ, ‘ನವದೆಹಲಿಯಲ್ಲಿನ ಬೀದಿ ನಾಯಿಗಳನ್ನು ಸ್ಥಳಾಂತರಗೊಳಿಸುವ ಬಗೆಗಿನ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ನಾನು ಏನೂ ಪ್ರಶ್ನೆ ಮಾಡುವುದಿಲ್ಲ. ಅದರದ್ದೇ ಆದ ಕಾರಣಗಳು ಇರಬಹುದು. ಆದರೆ ಶ್ವಾನಗಳ ಆರೋಗ್ಯ, ಅವುಗಳ ಜೀವನ ಚಕ್ರದ ಮೇಲಾಗುವ ಬದಲಾವಣೆಗಳ ಮೇಲೆ ಯಾವ ರೀತಿಯ ಪರಿಣಾಮ ಉಂಟು ಮಾಡುತ್ತವೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಆ ಮೂಲಕ ಶ್ವಾನಗಳನ್ನು ಆಶ್ರಯ ತಾಣಗಳಲ್ಲಿ ಇಡುವುದು ಅವುಗಳ ಸ್ವಾತಂತ್ರ್ಯ ಹರಣ ಮಾಡಿದ ಹಾಗಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
‘ಬೀದಿ ನಾಯಿಗಳು ಸಾಧಾರಣವಾಗಿದ್ದ ಸಮಾಜದಲ್ಲಿ ನಾನು ಬೆಳೆದಿದ್ದು, ನಮ್ಮ ಕುಟುಂಬದವರು ಕೆಲವಾರು ಬೀದಿ ನಾಯಿಗಳನ್ನು ದತ್ತು ಪಡೆದು ಸಾಕುತ್ತಿದ್ದೇವೆ. ಶ್ವಾನಗಳು ನಮಗೆ ನೀಡುವ ಪ್ರೀತಿ ಮತ್ತು ನಿಷ್ಠೆ ಅಪಾರವಾದುದು. ಅವುಗಳು ಬೀದಿಯಲ್ಲಿ ಬೆಳೆಯುವುದನ್ನು ಬಯಸಿದ್ದಲ್ಲ, ಆದರೆ ನಾವುಗಳು ಮನಸ್ಸು ಮಾಡಿದರೆ ಅವುಗಳಿಗೆ ಮನೆ ನೀಡಬಹುದು. ಧ್ವನಿ ಇಲ್ಲದ ಜೀವಿಗಳಿಗೆ ನಾವು ಧ್ವನಿ ಆಗೋಣ, ಬೀದಿ ನಾಯಿಗಳನ್ನು ದತ್ತು ಪಡೆಯೋಣ’ ಎಂದಿದ್ದಾರೆ.
ಸುದೀಪ್ ಮಾತ್ರವಲ್ಲದೆ ನಟ, ನಿರ್ದೇಶಕ, ನಿರ್ಮಾಪಕ ರಾಜ್ ಬಿ ಶೆಟ್ಟಿ ಅವರು ಸಹ ಈ ಬಗ್ಗೆ ಟ್ವೀಟ್ ಮಾಡಿ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.