ನ್ಯೂಸ್

ಅರವಿಂದ್ ಕೇಜ್ರಿವಾಲ್​ಗೆ ಮಧ್ಯಂತರ ಜಾಮೀನು

ನವದೆಹಲಿ: ಮದ್ಯ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ಈ ಪ್ರಕರಣದಲ್ಲಿ ತನ್ನ ಬಂಧನ ಪ್ರಶ್ನಿಸಿ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಿಸ್ತೃತ ಪೀಠಕ್ಕೆ ವರ್ಗಾಯಿಸಿತು.

ಕೇಜ್ರಿವಾಲ್​ ಜಾಮೀನು ಪಡೆದಿದ್ದರೂ ಸಿಬಿಐ ಪ್ರಕರಣದಲ್ಲಿ ಅರೆಸ್ಟ್​ ಆಗಿರುವುದರಿಂದ ತಿಹಾರ್ ಜೈಲಿನಲ್ಲಿಯೇ ಇರಬೇಕಾಗಿದೆ.

ಮದ್ಯ ಹಗರಣ ಪ್ರಕರಣದಲ್ಲಿ ಏಪ್ರಿಲ್ 9ರಂದು ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ,ಕೇಜ್ರಿವಾಲ್​ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ದ್ವಿಸದಸ್ಯ ಪೀಠ ಮೇ 17ರಂದು ಇಡಿ ಮತ್ತು ಸಿಎಂ ವಾದ ಆಲಿಸಿ ತೀರ್ಪನ್ನು ಕಾಯ್ದಿರಿಸಿತ್ತು.

ಈಗ ಮಧ್ಯಂತರ ಜಾಮೀನು ತೀರ್ಪು ಹೊರಬಿದ್ದಿದೆ. ಈ ಸಂದರ್ಭದಲ್ಲಿ ಪೀಠ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಸಿಎಂ ಹುದ್ದೆಯಿಂದ ಕೆಳಗಿಳಿಯುವ ಬಗ್ಗೆ ನ್ಯಾಯಾಲಯ ಯಾವುದೇ ಆದೇಶ ನೀಡಿಲ್ಲ. ಜನರಿಂದ ಆಯ್ಕೆಯಾದ ಜನಪ್ರತಿನಿಧಿಯಾಗಿ ಮುಖ್ಯಮಂತ್ರಿ ಸ್ಥಾನದಲ್ಲಿದ್ದಾರೆ. ಅವರನ್ನು ಬಂಧಿಸಿರುವುದರಿಂದ ಹುದ್ದೆಯಿಂದ ಕೆಳಗಿಳಿಯುವ ನಿರ್ಧಾರ ಅವರದೇ ಆಗಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.