ನ್ಯೂಸ್

ಅಕ್ರಮ ಹಣ ವರ್ಗಾವಣೆ ಪ್ರಕರಣ; ಮಾಜಿ ಸಚಿವ ನವಾಬ್​ ಮಲಿಕ್​ಗೆ ಮಧ್ಯಂತರ​ ಜಾಮೀನು

ನವದೆಹಲಿ: ಅಕ್ರಮ ಹಣ ವರ್ಗಾವನೆ ಪ್ರಕರಣದಲ್ಲಿ ಜೈಲು ಸೇರಿದ್ದ ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಕ್ಷದ ಶಾಸಕ, ಮಾಜಿ ಸಚಿವ ನವಾಬ್​ ಮಲಿಕ್​ಗೆ ಸುಪ್ರೀಂ ಕೋರ್ಟ್​ ಎರಡು ತಿಂಗಳ ಮಧ್ಯಂತರ ಜಾಮೀನು ನೀಡಿದೆ.

ಜಾರಿ ನಿರ್ದೇಶನಾಲಯದ ವಶದಲ್ಲಿರುವ ನವಾಬ್​ ಮಲಿಕ್​ ಅನಾರೋಗ್ಯದ ನಿಮಿತ್ತ ಚಿಕಿತ್ಸೆ ಪಡೆಯುತ್ತಿರುವ ಕಾರಣ ತಮಗೆ ಜಾಮೀನು ನೀಡುವಂತೆ ಬಾಂಬೆ ಹೈಕೋರ್ಟ್ ಮೊರರೆ ಹೋಗಿದ್ದರು. ಜುಲೈ 13ರಂದು ನ್ಯಾಯಾಲಯ ಇವರ ಅರ್ಜಿಯನ್ನು ವಜಾ ಮಾಡಿತ್ತು. ಬಾಂಬೆ ಹೈಕೋರ್ಟ್​ ಆದೇಶವನ್ನು ಪ್ರಶ್ನಿಸಿ ನವಾಬ್​ ಮಲಿಕ್​ ಪರ ವಕೀಲರು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದರು.

ಅರ್ಜಿ ವಿಚಾರಣೆ ನಡೆಸಿದ ಅನಿರುದ್ಧ ಬೋಸ್​ ಮತ್ತು ಬೇಲಾ.ಎಂ. ತ್ರಿವೇದಿ ಅವರಿದ್ದ ದ್ವಿಸದಸ್ಯ ಪೀಠವು ವಾದ-ಪ್ರತಿವಾದವನ್ನು ಸುದೀರ್ಘವಾಗಿ ಆಲಿಸಿದ ನಂತರ ನವಾಬ್​ ಮಲಿಕ್​ ಅವರಿಗೆ ಎರಡು ತಿಂಗಳ ಮಧ್ಯಂತರ ಜಾಮೀನನ್ನೂ ಮಂಜೂರು ಮಾಡಿದೆ.

ಮೂತ್ರಪಿಂಡದ ಸೋಂಕು ಸೇರಿದಂತೆ ಇತರೆ ಖಾಯಿಲೆಗಳಿಂದ ಬಳಲುತ್ತಿರುವ ನವಾಬ್​ ಮಲಿಕ್​ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ 2022ರ ಫೆಬ್ರವರಿ ತಿಂಗಳಲ್ಲಿ ನವಾಬ್​ ಮಲಿಕ್​ರನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿತ್ತು.

1993ರ ಬಾಂಬೆ ಸರಣಿ ಸ್ಪೋಟದ ಪ್ರಮುಖ ಆರೋಪಿ ದಾವೂದ್​ ಇಬ್ರಾಹಿಂ ಹಾಗೂ ಆತನ ಸಹಚರರ ಜೊತೆ ಅಕ್ರಮ ಚಟುವಟಿಕೆ ಹಾಗೂ ಹಣ ವರ್ಗಾವಣೆ ಮಾಡಿದ ಆರೋಪದ ಮೇಲೆ ನವಾಬ್​ ಮಲಿಕ್​ರನ್ನು ಜಾರಿ ನಿರ್ದೇಶನಾಲಯ ರಾಷ್ಟ್ರೀಯ ತನಿಖಾ ದಳದ(NIA) FIR ಆಧರಿಸಿ ವಶಕ್ಕೆ ಪಡೆದಿತ್ತು.