ನ್ಯೂಸ್

ಕರ್ನಾಟಕದಲ್ಲಿ ಕಮಲ್​​ 'ಥಗ್​ ಲೈಫ್'​ ಬಿಡುಗಡೆಗೆ 'ಸುಪ್ರೀಂ' ಅಸ್ತು! ಇಷ್ಟವಿಲ್ಲದಿದ್ರೆ ಚಿತ್ರ ನೋಡಬೇಡಿ ಎಂದ ಕೋರ್ಟ್​ | Thug Life

Thug Life Controversy: ಜೂ.03ರಂದು ತಮಿಳು ನಟ ಕಮಲ್ ಹಾಸನ್ (Kamal Haasan) ತಮ್ಮ ಸಿನಿಮಾ ‘ಥಗ್​ ಲೈಫ್’​ ಚಿತ್ರ ಕರ್ನಾಟಕದಲ್ಲಿ ಬಿಡುಗಡೆಗೊಳಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್​, ನಟನನ್ನು ಹಿಗ್ಗಾಮುಗ್ಗಾ ಜಾಡಿಸಿ, ರಾಜ್ಯದಲ್ಲಿ ಚಿತ್ರ ರಿಲೀಸ್​ಗೆ​​ ತಡೆ ನೀಡಿತ್ತು. ಈ ಪ್ರಕರಣ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದು, ಇದೀಗ ನ್ಯಾಯಾಲಯ ನಟನ ಪರ ಆದೇಶ ಹೊರಡಿಸಿದೆ.

ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಚಿತ್ರ ಬಿಡುಗಡೆಗೆ ತಡೆ ಹೇರುವುದು ಸರಿಯಲ್ಲ. ನೆಲದ ಕಾನೂನು ಎತ್ತಿಹಿಡಿಯುವುದು ಮುಖ್ಯ. ಕ್ಷಮೆ ಕೇಳಿ ಎಂದು ಒತ್ತಾಯಿಸುವುದು ಕೂಡ ಸರಿಯಲ್ಲ. ಸಿನಿಮಾ ನೋಡಲು ಇಷ್ಟವಿಲ್ಲ ಎಂದಾದರೆ ನೋಡಬೇಡಿ ಎಂದು ಸುಪ್ರೀಂಕೋರ್ಟ್​ನ ಜಸ್ಟೀಸ್ ಮನಮೋಹನ್, ಜೆ. ಭುಯನ್ ಅವರನ್ನೊಳಗೊಂಡ ಪೀಠವು ಆದೇಶ ನೀಡಿದೆ.

ಜನರು ಬಂದು ಘೇರಾವ್ ಮಾಡ್ತೇವೆ ಎಂದು ಹೇಳಿದರು ಎಂಬ ಕಾರಣಕ್ಕೆ ಚಿತ್ರದ ಬಿಡುಗಡೆಗೆ ತಡೆ ಹೇರಬಾರದು. ರಿಲೀಸ್​ ಮಾಡಲು ಮುಂದಾದರೆ ಸಿನಿಮಾ ಹಾಲ್ ಸುಡುತ್ತೇವೆ ಎಂದಿದ್ದಕ್ಕೆ ಸಿನಿಮಾ ಬಿಡುಗಡೆ ನಿಲ್ಲಿಸಬಾರದು. ಸಿಬಿಎಫ್‌ಸಿ ಸರ್ಟೀಫಿಕೇಟ್ ಆಧಾರದ ಮೇರೆಗೆ ಸಿನಿಮಾ ಬಿಡುಗಡೆ ಮಾಡಬಹುದು ಎಂದು ಸುಪ್ರೀಂಕೋರ್ಟ್​ ಹೇಳಿದೆ. ಈ ಮೂಲಕ ಕರ್ನಾಟಕದಲ್ಲಿ ಕಮಲ್ ಹಾಸನ್ ಅಭಿನಯದ ಥಗ್​ ಲೈಫ್​ ಚಿತ್ರದ ರಿಲೀಸ್​ಗೆ ಕೋರ್ಟ್​ ಅನುಮತಿ ಸೂಚಿಸಿದೆ.

ಕನ್ನಡ ಭಾಷೆ ಕುರಿತಂತೆ ನಟ ಕಮಲ್ ಹಾಸನ್​ ಹೇಳಿಕೆಗೆ ಕ್ಷಮೆಯಾಚಿಸಲು ಅಥವಾ ವಿಷಾಧಿಸಲು ಕರ್ನಾಟಕ ಹೈಕೋರ್ಟ್​ಗೆ ಯಾವುದೇ ಹಕ್ಕಿಲ್ಲ ಎಂದ ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ. ಸದ್ಯ ಅರ್ಜಿ ವಿಚಾರಣೆಯನ್ನು ಗುರುವಾರಕ್ಕೆ (ಜೂ. 19) ಮುಂದೂಡಲಾಗಿದೆ.