ನ್ಯೂಸ್

ಅದಾನಿಗೆ ನಿರಾಳತೆ ನೀಡಿದ ಸುಪ್ರೀಂ: ಏನಿದು ಹಿಂಡನ್​ಬರ್ಗ್ ವರದಿ? ಪ್ರಕರಣ ನಡೆದ ಹಾದಿ ಹೀಗಿದೆ....

ನವದೆಹಲಿ: ಹಿಂಡನ್​ಬರ್ಗ್ ಪ್ರಕರಣದಲ್ಲಿ ಅದಾನಿ ಸಮೂಹಕ್ಕೆ ಸುಪ್ರೀಂ ಕೋರ್ಟ್ ಬುಧವಾರ ನಿರಾಳತೆ ನೀಡಿದೆ. ಷೇರುಗಳ ಬೆಲೆಯಲ್ಲಿ ಕೃತಕ ಏರಿಕೆ ಮಾಡಿದ ಆರೋಪದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸಲು ಕೋರ್ಟ್ ನಿರಾಕರಿಸಿದೆ. ಬಾಕಿ ಉಳಿದಿರುವ ಎರಡು ಪ್ರಕರಣಗಳ ತನಿಖೆಯನ್ನು ಪೂರ್ಣಗೊಳಿಸಲು ಮಾರುಕಟ್ಟೆ ನಿಯಂತ್ರಕ ಸೆಬಿಗೆ ಸೂಚಿಸಿದ್ದು, ಇದಕ್ಕಾಗಿ ಮೂರು ತಿಂಗಳ ಗಡುವು ನೀಡಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ, ಸೆಬಿ ತನಿಖೆಯಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ. ನ್ಯಾಯಾಲಯವು ಈ ಹಿಂದೆ 22 ಪ್ರಕರಣಗಳ ತನಿಖೆಯನ್ನು ಸೆಬಿಗೆ ಹಸ್ತಾಂತರಿಸಿತ್ತು. ಅದರಲ್ಲಿ ಎರಡು ತನಿಖೆ ಬಾಕಿ ಇದೆ. ಬಾಕಿ ಉಳಿದಿರುವ ತನಿಖೆಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದೆ. ಸೆಬಿ ತನಿಖೆಯಲ್ಲಿ ಲೋಪವಾಗಿದೆ ಎಂದು ಸಾಬೀತುಪಡಿಸಲು ಯಾವುದೇ ಆಧಾರವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸೆಬಿ ಕಾನೂನು ಪ್ರಕಾರ ತನ್ನ ತನಿಖೆಯನ್ನು ಮುಂದುವರಿಸುತ್ತದೆ. ಸೆಬಿ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ಆಧಾರವಿಲ್ಲ. ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕು ಎಂಬುದರಲ್ಲಿ ಯಾವುದೇ ಆಧಾರವಿಲ್ಲ. ಹಿಂಡೆನ್​ಬರ್ಗ್ ವಿರುದ್ಧ ಕಾನೂನು ಉಲ್ಲಂಘನೆಯ ಆರೋಪಗಳಿದ್ದರೆ ಸರ್ಕಾರ ಮತ್ತು ಸೆಬಿ ತನಿಖೆ ನಡೆಸಲಿ. ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲಿ ಎಂದು ಕೋರ್ಟ್ ಹೇಳಿದೆ.

ನಿಯಂತ್ರಣ ಕ್ರಮಗಳನ್ನು ಬಲಪಡಿಸಲು ತಜ್ಞರ ಸಮಿತಿಯ ಶಿಫಾರಸುಗಳನ್ನು ಪರಿಗಣಿಸುವಂತೆ ಕೇಂದ್ರ ಸರ್ಕಾರ ಮತ್ತು ಸೆಬಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಎಫ್​ಪಿಐ ಮತ್ತು ಎಲ್​ಒಡಿಆರ್ ನಿಯಮಗಳ ಮೇಲಿನ ತಿದ್ದುಪಡಿಗಳನ್ನು ರದ್ದುಗೊಳಿಸುವಂತೆ ಸೆಬಿಗೆ ನಿರ್ದೇಶಿಸಲು ಯಾವುದೇ ಆಧಾರವಿಲ್ಲ ಎಂದು ಸುಪ್ರೀಂ ಹೇಳಿದೆ. ಆರ್ಗನೈಸ್ಡ್ ಕ್ರೖೆಮ್ ಆಡ್ ಕರಪ್ಷನ್ ರಿಪೋರ್ಟಿಂಗ್ ಪ್ರಾಜೆಕ್ಟ್ (ಒಸಿಸಿಆರ್​ಪಿ) ಪ್ರಕಟಿಸಿದ ವರದಿಯ ಆಧಾರದ ಮೇಲೆ ಈ ಪ್ರಕರಣವನ್ನು ಸಿಬಿಐ ಅಥವಾ ಎಸ್​ಐಟಿಗೆ ವಹಿಸಲು ಸಾಧ್ಯವಿಲ್ಲ. ಆರೋಪಗಳ ಸತ್ಯಾಸತ್ಯತೆಯನ್ನು ಸರಿಯಾಗಿ ಪರಿಶೀಲಿಸದ ಮೂರನೇ ಸಂಸ್ಥೆಯ ವರದಿಯನ್ನು ನಿರ್ಣಾಯಕ ಪುರಾವೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಪೀಠ ಹೇಳಿದೆ.

ಏನಿದು ಹಿಂಡನ್​ಬರ್ಗ್ ಪ್ರಕರಣ?

ಉದ್ಯಮಿ ಗೌತಮ್ ಅದಾನಿ ಕಾರ್ಪೆರೇಟ್ ಇತಿಹಾಸದಲ್ಲೇ ಅತಿ ದೊಡ್ಡ ವಂಚನೆ ಮಾಡಿದ್ದಾರೆ ಎಂದು ಅಮೆರಿಕ ಮೂಲಕ ಹಿಂಡೆನ್​ಬರ್ಗ್ ರೀಸರ್ಚ್ ವರದಿ ಆರೋಪ ಮಾಡಿತ್ತು. ಅದಾನಿ ಸಮೂಹ ಮೋಸದ ವಹಿವಾಟುಗಳನ್ನು ನಡೆಸಿದೆ. ಷೇರು ಬೆಲೆಯನ್ನು ಕೃತವಾಗಿ ಹೆಚ್ಚಿಸಿದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಿತ್ತು. ಜತೆಗೆ ದೊಡ್ಡ ಪ್ರಮಾಣದಲ್ಲಿ ಅದಾನಿ ಸಮೂಹದ ಷೇರುಗಳನ್ನು ಮಾರಾಟ (ಶಾರ್ಟ್ ಸೆಲ್) ಮಾಡಿತ್ತು. ಈ ಬೆನ್ನಲ್ಲೇ ಅದಾನಿ ಗ್ರೂಪ್ ಷೇರುಗಳು ಭಾರಿ ಕುಸಿತ ಕಂಡಿದ್ದವು. ಇದಾದ ನಂತರ ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್​ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು.

ಪ್ರಕರಣ ನಡೆದ ಹಾದಿ...

* 2023 ಜನವರಿ - ಅದಾನಿ ಗ್ರೂಪ್ ಕಂಪನಿಗಳು ತನ್ನ ಷೇರು ಬೆಲೆಗಳನ್ನು ಕೃತಕವಾಗಿ ಹೆಚ್ಚಳ ಮಾಡಿವೆ ಎಂದು ಆರೋಪಿಸಿ ಹಿಂಡನ್​ಬರ್ಗ್ ರಿಸರ್ಚ್ ವರದಿ ಪ್ರಕಟ

* 2023 ಫೆಬ್ರವರಿ - ಸುಪ್ರೀಂ ಕೋರ್ಟ್​ಗೆ ಪಿಐಎಲ್ ಸಲ್ಲಿಕೆ. ಆರೋಪಗಳನ್ನು ತನಿಖೆ ಮಾಡಲು ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆಗೆ ಮನವಿ

* 2023 ಮಾರ್ಚ್ 2 - ಅದಾನಿ ಗ್ರೂಪ್​ನ ಷೇರು ಬೆಲೆ ಕೃತಕ ಏರಿಳಿತ ಆರೋಪಗಳ ಬಗ್ಗೆ ಎರಡು ತಿಂಗಳೊಳಗೆ ತನಿಖೆ ನಡೆಸುವಂತೆ ಷೇರು ಮಾರುಕಟ್ಟೆ ನಿಯಂತ್ರಕ ಸೆಬಿಗೆ ಸುಪ್ರೀಂ ಕೋರ್ಟ್ ಸೂಚನೆ. ಭಾರತೀಯ ಹೂಡಿಕೆದಾರರ ರಕ್ಷಣೆಗೆ ಕೈಗೊಂಡ ಕ್ರಮಗಳ ಪರಿಶೀಲಿಸಲು ಸಮಿತಿ ರಚನೆ

* 2023 ಮೇ: ನ್ಯಾಯಾಲಯ ನೇಮಿಸಿದ ತಜ್ಞರ ಸಮಿತಿಯಿಂದ ವರದಿ ಸಲ್ಲಿಕೆ

* 2023 ಮೇ 17: ಅದಾನಿ ಗ್ರೂಪ್​ನಿಂದ ಷೇರು ಬೆಲೆ ಕೃತಕ ಏರಿಳಿತ ಆರೋಪಗಳ ತನಿಖೆಗೆ ಸಂಬಂಧಿಸಿದಂತೆ ವರದಿಯನ್ನು ಸಲ್ಲಿಸಲು ಸೆಬಿಗೆ ಇನ್ನಷ್ಟು ಸಮಯ ನೀಡಿದ ಕೋರ್ಟ್

* 2023 ನವೆಂಬರ್ 24: ಅದಾನಿ-ಹಿಂಡೆನ್​ಬರ್ಗ್​ಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಅಂತ್ಯ. ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

* 2024 ಜನವರಿ 3: ಷೇರುಗಳ ಬೆಲೆ ಕೃತಕ ಏರಿಳಿತ ಸಂಬಂಧ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸಲು ಸುಪ್ರೀಂ ಕೋರ್ಟ್ ನಿರಾಕರಣೆ. ಮೂರು ತಿಂಗಳೊಳಗೆ ಬಾಕಿ ಉಳಿದಿರುವ ಎರಡು ಪ್ರಕರಣಗಳ ತನಿಖೆ ಪೂರ್ಣಗೊಳಿಸಲು ಸೆಬಿಗೆ ಸೂಚನೆ

ಸತ್ಯವು ಮೇಲುಗೈ ಸಾಧಿಸಿದೆ. ಸತ್ಯಮೇವ ಜಯತೇ. ನಮ್ಮ ಬೆಂಬಲಕ್ಕೆ ನಿಂತವರಿಗೆ ನಾನು ಆಭಾರಿಯಾಗಿದ್ದೇನೆ. ಭಾರತದ ಬೆಳವಣಿಗೆಗೆ ನಮ್ಮ ವಿನಮ್ರ ಕೊಡುಗೆ ಮುಂದುವರಿಯುತ್ತದೆ. ಜೈ ಹಿಂದ್.

| ಗೌತಮ್ ಅದಾನಿ

ಹಿಂಡನ್​ಬರ್ಗ್ ವರದಿಯು ಒಂದು ವರ್ಷದ ಹಿಂದೆಯೇ ಸಾರ್ವಜನಿಕಗೊಂಡಿದೆ. ವರದಿಯಲ್ಲಿ ಮಾಡಲಾದ ಆರೋಪಗಳ ತನಿಖೆ ನಡೆಸಲು ಸೆಬಿ ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದೆ ಎಂಬುದು ಸತ್ಯ. ಇಂತಹ ಸೂಕ್ಷ್ಮ ವಿಷಯದ ಬಗ್ಗೆ ತನಿಖೆ ಪೂರ್ಣಗೊಳಿಸಲು ಒಂದು ವರ್ಷ ತೆಗೆದುಕೊಂಡಿರುವುದು ಸೆಬಿಯ ಲೋಪವನ್ನು ತೋರಿಸುತ್ತದೆ. ನಾವು ಈ ವಿಷಯವನ್ನು ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿಯಲ್ಲೂ ಪ್ರಸ್ತಾಪಿಸಿದ್ದೇವೆ.

| ಮನಿಶ್ ತಿವಾರಿ, ಕಾಂಗ್ರೆಸ್ ನಾಯಕ

ಷೇರುಗಳ ಬೆಲೆ ಭಾರಿ ಏರಿಕೆ

ಸುಪ್ರೀಂ ಕೋರ್ಟ್ ತೀರ್ಪು ಹೊರಬರುತ್ತಿದ್ದಂತೆ ಅದಾನಿ ಗ್ರೂಪ್ ಕಂಪನಿಗಳ ಷೇರುಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಅದಾನಿ ಎನರ್ಜಿ ಶೇ. 11.60, ಅದಾನಿ ಟೋಟಲ್ ಗ್ಯಾಸ್ ಶೇ. 9.84, ಅದಾನಿ ಗ್ರೀನ್ ಎನರ್ಜಿ ಶೇ. 6 ಮತ್ತು ಅದಾನಿ ಪವರ್ ಶೇ. 4.99 ರಷ್ಟು ಏರಿಕೆ ಕಂಡಿದೆ. ಅದಾನಿ ವಿಲ್ಮಾರ್ ಶೇ. 3.97, ಎನ್​ಡಿಟಿವಿ ಶೇ. 3.66, ಅದಾನಿ ಎಂಟರ್​ಪ್ರೖೆಸಸ್ ಶೇ. 2.45, ಅದಾನಿ ಪೋರ್ಟ್ ಶೇ. 1.39, ಅಂಬುಜಾ ಸಿಮೆಂಟ್ ಶೇ. 0.94 ಮತ್ತು ಎಸಿಸಿ ಶೇ 0.10 ಏರಿಕೆ ದಾಖಲಿಸಿದೆ.