supreme court 
ನ್ಯೂಸ್

ರಿಲಯನ್ಸ್ ಬೆಂಬಲಿತ ಜಿಝಡ್​ಆರ್​ಆರ್​ಸಿ ವಿರುದ್ಧದ ಪಿಐಎಲ್​ ವಜಾಗೊಳಿಸಿದ ಸುಪ್ರೀಂಕೋರ್ಟ್​

ನವದೆಹಲಿ: ಗುಜರಾತ್​ನ ಜಾಮ್​ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೃಗಾಲಯಕ್ಕೆ ಸಂಬಂಧಿಸಿದಂತೆ ರಿಲಯನ್ಸ್​ ಇಂಡಸ್ಟ್ರೀಸ್​ ಬೆಂಬಲಿತ ಗ್ರೀನ್ಸ್​ ಝೂಲಾಜಿಕಲ್ ರೆಸ್ಕ್ಯೂ ಆ್ಯಂಡ್ ರಿಹ್ಯಾಬಿಲಿಟೇಷನ್​ ಸೆಂಟರ್​ (ಜಿಝಡ್​​ಆರ್​ಆರ್​ಸಿ) ವಿರುದ್ಧ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಮೃಗಾಲಯಕ್ಕೆ ಸಂಬಂಧಿತ ಹಲವು ಅಂಶಗಳನ್ನು ಪ್ರಶ್ನಿಸಿ ಈ ಪಿಐಎಲ್​ ಸಲ್ಲಿಸಲಾಗಿತ್ತು.

ಈ ಮೃಗಾಲಯ ಸ್ಥಾಪನೆಯನ್ನು ಪ್ರಶ್ನಿಸಿ ಕಾರ್ಯಕರ್ತರೊಬ್ಬರು ಅರ್ಜಿ ಸಲ್ಲಿಸಿದ್ದು, ಜಿಝಡ್​​ಆರ್​ಆರ್​ಸಿ ಭಾರತ ಮತ್ತು ವಿದೇಶದಿಂದ ಪ್ರಾಣಿಗಳನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ನಿಷೇಧಿಸಬೇಕು ಮತ್ತು ಜಿಝಡ್​​ಆರ್​ಆರ್​ಸಿ ಕಾರ್ಯಾಚರಣೆಗಳು ಮತ್ತು ನಿರ್ವಹಣೆಯನ್ನು ವಿಶೇಷ ತನಿಖಾ ದಳದಿಂದ ವಿಚಾರಣೆ ನಡೆಸಬೇಕು ಎಂದು ಕೋರಿಕೊಂಡಿದ್ದರು. ಜಿಝಡ್​​ಆರ್​ಆರ್​ಸಿ ಭಾರತದೊಳಗೆ ಮತ್ತು ಹೊರಗೆ ಪ್ರಾಣಿಗಳನ್ನು ವರ್ಗಾಯಿಸುವುದನ್ನು ಹಾಗೂ ಜಿಝಡ್​​ಆರ್​ಆರ್​ಸಿಯ ಅನುಭವ-ಸಾಮರ್ಥ್ಯದ ಬಗ್ಗೆಯೂ ಈ ಪಿಐಎಲ್​​ನಲ್ಲಿ ಪ್ರಶ್ನೆ ಮಾಡಲಾಗಿದೆ. ಇವೆಲ್ಲದಕ್ಕೂ ಸಂಬಂಧಿಸಿದಂತೆ ಜಿಝಡ್​​ಆರ್​ಆರ್​ಸಿ ವಿವರವಾದ ಪ್ರತಿಕ್ರಿಯೆಯನ್ನು ಸಲ್ಲಿಸಿದ ನಂತರ, ನ್ಯಾಯಾಲಯವು ಆಗಸ್ಟ್​ 16ರಂದು ಅಹವಾಲನ್ನು ಆಲಿಸಿತು. ಮಾತ್ರವಲ್ಲ ಜಿಝಡ್​​ಆರ್​ಆರ್​ಸಿ ವಿರುದ್ಧ ಎತ್ತಲಾದ ಎಲ್ಲ ಆಕ್ಷೇಪಗಳನ್ನು ತಿರಸ್ಕರಿಸುವ ಜತೆಗೆ ಅರ್ಜಿಯನ್ನು ವಜಾಗೊಳಿಸಿದೆ.

ಗೌರವಾನ್ವಿತ ಸುಪ್ರೀಂಕೋರ್ಟ್‌ನ ತೀರ್ಪಿನಿಂದ ನಾವು ವಿನಮ್ರರಾಗಿದ್ದೇವೆ. ಪ್ರಾಣಿ ಕಲ್ಯಾಣಕ್ಕಾಗಿ ನಾವು ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ. ಪ್ರಾಣಿಗಳ ಕಲ್ಯಾಣ, ರಕ್ಷಣೆ, ಪುನರ್ವಸತಿ ಮತ್ತು ಸಂರಕ್ಷಣೆಗೆ ಹಾಗೂ ಕಷ್ಟಕರ ಪರಿಸ್ಥಿತಿಗಳಿಂದ ರಕ್ಷಿಸಬೇಕಾದ ಪ್ರಾಣಿಗಳಿಗೆ ವಿಶ್ವದರ್ಜೆಯ ಪುನರ್ವಸತಿ ಆರೈಕೆಯನ್ನು ಒದಗಿಸಲು ಜಿಝಡ್​​ಆರ್​ಆರ್​ಸಿ ಬದ್ಧವಾಗಿದೆ. | ಧನರಾಜ್​ ನಾಥ್ವಾನಿ ಮುಖ್ಯಸ್ಥ, ಜಿಝಡ್​​ಆರ್​ಆರ್​ಸಿ

ಜಿಝಡ್​​ಆರ್​ಆರ್​ಸಿ ಕಾನೂನಿನ ಪರಿಭಾಷೆಯಲ್ಲಿ ಕಟ್ಟುನಿಟ್ಟಾಗಿ ತನ್ನ ಚಟುವಟಿಕೆಗಳನ್ನು ನಡೆಸುತ್ತಿದೆ. ಮೂಲಸೌಕರ್ಯ, ಕಾರ್ಯನಿರ್ವಹಣೆ, ಪಶುವೈದ್ಯರು, ಕ್ಯುರೇಟರ್‌ಗಳು, ಜೀವಶಾಸ್ತ್ರಜ್ಞರು, ಪ್ರಾಣಿಶಾಸ್ತ್ರಜ್ಞರು ಮತ್ತು ಇತರ ತಜ್ಞರು ತೊಡಗಿಸಿಕೊಂಡಿರುವ ಬಗ್ಗೆ ಜಿಝಡ್​​ಆರ್​ಆರ್​ಸಿ ಸಲ್ಲಿಸಿರುವ ಅಂಶಗಳನ್ನು ಕೂಡ ನ್ಯಾಯಾಲಯವು ಗಮನಿಸಿದೆ. ಈ ಮೃಗಾಲಯ ಶೈಕ್ಷಣಿಕ ಉದ್ದೇಶಕ್ಕಾಗಿ ಸಾರ್ವಜನಿಕ ಪ್ರದರ್ಶನಕ್ಕೆ ತೆರೆದಿರುತ್ತದೆ ಮತ್ತು ಅದರ ಉಳಿದ ಸೌಲಭ್ಯಗಳು ಭಾರತದಿಂದ ಮಾತ್ರವಲ್ಲದೆ ಎಲ್ಲೆಡೆ ರಕ್ಷಣೆಯ ಅಗತ್ಯವಿರುವ ಪ್ರಾಣಿಗಳ ಕಲ್ಯಾಣಕ್ಕಾಗಿ ರಕ್ಷಣಾ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ. ಪ್ರಾಣಿಗಳ ಕಲ್ಯಾಣ, ರಕ್ಷಣೆ ಮತ್ತು ಪುನರ್ವಸತಿ ಮತ್ತು ಸಂರಕ್ಷಣೆಯ ಉದ್ದೇಶದಿಂದ ಇದು ಕೂಡಿರಲಿದೆ ಎಂದು ಮನವರಿಕೆ ಮಾಡಿಕೊಡುವ ಮೂಲಕ ಝೂಲಾಜಿಕಲ್ ಪಾರ್ಕ್ ಸ್ಥಾಪಿಸುವುದನ್ನು ಜಿಝಡ್‌ಆರ್‌ಆರ್‌ಸಿಯು ನ್ಯಾಯಾಲಯದ ಮುಂದೆ ಸ್ಪಷ್ಟಪಡಿಸಿದೆ.

ಜಿಝಡ್‌ಆರ್‌ಆರ್‌ಸಿ ವಿರುದ್ಧ ಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ತರ್ಕ ಅಥವಾ ಆಧಾರ ಕಂಡುಬಂದಿಲ್ಲ. ಜಿಝಡ್‌ಆರ್‌ಆರ್‌ಸಿಯ ಕಾರ್ಯನಿರ್ವಹಣೆ ಕೂಡ ಯಾವುದೇ ವಿವಾದದ ವ್ಯಾಪ್ತಿಯಲ್ಲಿ ಇಲ್ಲ. ಅಲ್ಲದೆ ಕಾನೂನಾತ್ಮಕವಾಗಿಯೂ ಜಿಝಡ್‌ಆರ್‌ಆರ್‌ಸಿಗೆ ಸಂಬಂಧಿಸಿದಂತೆ ಯಾವುದೇ ದೌರ್ಬಲ್ಯ ಕಾಣಿಸಿಲ್ಲ ಎಂಬುದಾಗಿ ನ್ಯಾಯಾಲಯ ಅಭಿಪ್ರಾಯಪಟ್ಟಿದ್ದಾಗಿ ಜಿಝಡ್‌ಆರ್‌ಆರ್‌ಸಿ ತಿಳಿಸಿದೆ.