ನವದೆಹಲಿ: ಯಾವುದೆ ತರಹದ ಅರ್ಜಿ, ಗುರುತಿನ ಚೀಟಿ ಇಲ್ಲದೆಯೇ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ RBI ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್(RBI) ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಹೊರಡಿಸಿದ ಅಧಿಸೂಚನೆಗಳನ್ನು ಪ್ರಶ್ನಿಸಿ ವಕೀಲ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿಯನ್ನು ತಕ್ಷಣವೇ ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಹೇಳಿ ಕೋರ್ಟ್ ಅರ್ಜಿಯನ್ನು ತಳ್ಳಿಹಾಕಿದೆ.
ವಕೀಲ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನಿರುದ್ಧ್ ಬೋಸ್ ಹಾಗೂ ರಾಜೇಶ್ ಬಿಂದಲ್ ಅವರಿದ್ದ ದ್ವಿಸದಸ್ಯ ಪೀಠವು ಬೇಸಿಗೆ ರಜೆ ಮುಗಿದ ನಂತರ ಈ ವಿಚಾರವನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಲ್ಲಿ ಮಂಡಿಸುವಂತೆ ಅರ್ಜಿದಾರರಿಗೆ ಸೂಚನೆ ನೀಡಿತ್ತು.
ಇದಕ್ಕೂ ಮುನ್ನ ಮಾತನಾಡಿದ ವಕೀಲ ಅಶ್ವಿನಿ ಕಳೆದ 10 ದಿನಗಳಲ್ಲಿ 1.8 ಲಕ್ಷ ಕೋಟಿ ರೂ. ಮೌಲ್ಯದ 2,000 ₹ ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಲಾಗಿದೆ. ರಜೆಯ ನಂತರ ಅರ್ಜಿ ವಿಚಾರಣೆ ನಡೆಸಿದರೆ ಫಲಪ್ರದವಾಗಿರುವುದಿಲ್ಲ. ಬದಲಾವಣೆಯಾಗಿರುವ ಎಲ್ಲಾ ನೋಟುಗಳು ಕಪ್ಪುಹಣವಾಗಿದ್ದು ಜುಲೈ ವೇಳೆ ಸಂಪೂರ್ಣವಾಗಿ ವಿನಿಮಯವಾಗಿರಲಿದೆ ಎಂದು ನ್ಯಾಯಪೀಠದ ಗಮನ ಸೆಳೆದರು.