ನ್ಯೂಸ್

ರಾಹುಲ್ ಗಾಂಧಿ ವಿರುದ್ಧ ಸುಪ್ರೀಂ ಟೀಕೆ; ನ್ಯಾಯಾಧೀಶರು ‘ಅನಗತ್ಯ’ ಟಿಪ್ಪಣಿ ಮಾಡಿದ್ದಾರೆ ಎಂದ ವಿಪಕ್ಷಗಳ ಮೈತ್ರಿಕೂಟ | INDIA BLOCK

INDIA BLOCK: ಚೀನಾ, ಭಾರತದ ಭೂಮಿ ವಶಪಡಿಸಿಕೊಂಡಿದೆ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಸೋಮವಾರ ಸುಪ್ರೀಂಕೋರ್ಟ್​ ನ್ಯಾಯಾಧೀಶರು ನೀವು ಭಾರತೀಯರ ಎಂಬ ಟೀಕೆಗೆ ಪ್ರತಿಕ್ರಿಯಿಸಿರುವ ವಿಪಕ್ಷಗಳ ಇಂಡಿಯಾ ಮೈತ್ರಿಕೂಟ, ನ್ಯಾಯಾಧೀಶರು ಅನಗತ್ಯ ಟಿಪ್ಪಣಿ ಮಾಡಿದ್ದಾರೆ ಎಂದು ಮಂಗಳವಾರ(ಆಗಸ್ಟ್ 5) ಹೇಳಿದೆ.

ಇಂದು ಸಂಸತ್​ ಭವನದಲ್ಲಿ ನಡೆದ ವಿಪಕ್ಷಗಳ ನಾಯಕರ ಸಭೆಯಲ್ಲಿ, ಸುಪ್ರೀಂಕೋರ್ಟ್​ ದ್ವಿಸದಸ್ಯ ಪೀಠ ನೀಡಿದ ರಾಹುಲ್ ಗಾಂಧಿ ಕುರಿತಾದ ಟೀಕೆಯ ಕುರಿತು ಚರ್ಚೆ ನಡೆಸಿದರು. ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿ ವಿಪಕ್ಷಗಳ ನಾಯಕರು ಉಪಸ್ಥಿತರು ಹಾಜರಿದ್ದರು ಎನ್ನಲಾಗಿದೆ.

ಸಭೆಯ ಬಳಿಕ ಹೇಳಿಕೆ ಬಿಡುಗಡೆ ಮಾಡಿರುವ ಮೈತ್ರಿಕೂಟ, "ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳಲ್ಲಿ ಸರ್ಕಾರವನ್ನು ಪ್ರಶ್ನಿಸುವುದು ರಾಜಕೀಯ ಪಕ್ಷಗಳ ಪ್ರಜಾಸತ್ತಾತ್ಮಕ ಹಕ್ಕು ಮತ್ತು ಕರ್ತವ್ಯ. ರಾಹುಲ್ ಗಾಂಧಿ ವಿರುದ್ಧ ಸುಪ್ರೀಂ ಕೋರ್ಟ್ ಇತ್ತೀಚೆಗೆ ಮಾಡಿದ ಅವಲೋಕನ ‘ಅನಗತ್ಯ’ ಎಂದು ಪ್ರತಿಪಾದಿಸಿದೆ.

"ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳ ಬಗ್ಗೆ ಅಭಿಪ್ರಾಯ ನೀಡುವುದು ರಾಜಕೀಯ ಪಕ್ಷಗಳ, ವಿಶೇಷವಾಗಿ ವಿರೋಧ ಪಕ್ಷದ ನಾಯಕರ ಜವಾಬ್ದಾರಿಯಾಗಿದೆ. ನಮ್ಮ ಗಡಿಗಳನ್ನು ರಕ್ಷಿಸುವಲ್ಲಿ ಸರ್ಕಾರವು ಅದ್ಭುತವಾಗಿ ವಿಫಲವಾದಾಗ, ಅದನ್ನು ಹೊಣೆಗಾರರನ್ನಾಗಿ ಮಾಡುವುದು ಪ್ರತಿಯೊಬ್ಬ ನಾಗರಿಕನ ನೈತಿಕ ಕರ್ತವ್ಯವಾಗಿದೆ" ಎಂದು ಮೈತ್ರಿಕೂಟ ಹೇಳಿದೆ.

ಸುಪ್ರೀಂಕೋರ್ಟ್ ನ್ಯಾಯಾಧೀಶರು ಹೇಳಿದ್ದೇನು?

ಡಿಸೆಂಬರ್ 2022 ರ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಸೇನೆಯ ಬಗ್ಗೆ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲಕ್ನೋ ನ್ಯಾಯಾಲಯದಲ್ಲಿ ರಾಹುಲ್ ವಿರುದ್ಧದ ವಿಚಾರಣೆಗೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ. ಆದಾಗ್ಯೂ, ಕಾಂಗ್ರೆಸ್ ನಾಯಕನನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾ.ದೀಪಂಕರ್ ದತ್ತ ಟೀಕಿಸಿದ್ದರು.

ಭಾರತದ 2 ಕಿಮೀ ಭೂ ಪ್ರದೇಶವನ್ನು ಚೀನಾ ವಶಪಡಿಸಿಕೊಂಡಿದೆ ಎಂದು ಹೇಗೆ ಹೇಳುತ್ತಿರಿ?, ನಿಮಗೆ ಹೇಗೆ ತಿಳಿಯಿತು?, ನಿಜವಾದ ಭಾರತೀಯನಾಗಿದ್ದರೇ ಇಂತಹ ಮಾತನ್ನು ಹೇಳುತ್ತಿರಲಿಲ್ಲ ಎಂದು ರಾಹುಲ್ ಹೇಳಿಕೆಯನ್ನು ಖಂಡಿಸಿದ್ದರು. ಈ ವೇಳೆ ರಾಹುಲ್ ಪರ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ, ರಾಹುಲ್ ಗಾಂಧಿ ವಿಪಕ್ಷ ನಾಯಕರಾಗಿ ಇಂತಹ ವಿಷಯಗಳನ್ನು ಮಾತನಾಡಲಿಲ್ಲ ಅಂದ್ರೆ ವಿಪಕ್ಷ ನಾಯಕರಾಗಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ನ್ಯಾ.ದತ್ತ, ಈ ರೀತಿಯ ವಿಷಯಗಳನ್ನು ಸಂಸತ್​ನಲ್ಲಿ ಮಾತನಾಡಬೇಕು. ಸೋಷಿಯಲ್ ಮೀಡಿಯಾದಲ್ಲಿ ಯಾಕೆ ಪೋಸ್ಟ್ ಹಾಕಬೇಕು ಎಂದು ಪ್ರಶ್ನಿಸಿದ್ದರು.

ಸುಪ್ರೀಂಕೋರ್ಟ್ ಟೀಕೆ ಬೆನ್ನಲ್ಲೇ ಆಡಳಿತರೂಢ ಬಿಜೆಪಿ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಚೀನಾವನ್ನು ಬಲಪಡಿಸಲು ಪ್ರತಿಜ್ಞೆ ಮಾಡಿದ್ದಾರೆಂದು ವಾಗ್ದಾಳಿ ನಡೆಸಿತ್ತು. ಗಲ್ವಾನ್ ಘಟನೆಯಲ್ಲಿ 20 ಸೈನಿಕರ ಬಲಿದಾನಕ್ಕೆ ಪ್ರತಿಯೊಬ್ಬ ಭಾರತೀಯ ದೇಶಭಕ್ತನು ಉತ್ತರ ಹುಡುಕುತಿದ್ದಾನೆ. ಆದರೆ, ಕೇಂದ್ರ ಸರ್ಕಾರ ಗಮನವನ್ನು ಬೇರೆಡೆ ಸೆಳೆಯುವ, ಸುಳ್ಳು ಹೇಳುತ್ತಾ, ಸತ್ಯವನ್ನು ಮರೆಮಾಚುತ್ತಿದೆ ಎಂದು ಕಾಂಗ್ರೆಸ್​ ಕಿಡಿಕಾರಿತ್ತು. (ಏಜೆನ್ಸೀಸ್)