Priyanka Gandhi: ಚೀನಾ, ಭಾರತದ ಭೂಮಿ ವಶಪಡಿಸಿಕೊಂಡಿದೆ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಸೋಮವಾರ ಸುಪ್ರೀಂಕೋರ್ಟ್ ನ್ಯಾಯಾಧೀಶರು ಟೀಕಿಸಿದ ಹಿನ್ನೆಲೆ ಇಂದು(ಆಗಸ್ಟ್ 5) ತಮ್ಮ ಸಹೋದರನ ಬೆಂಬಲಕ್ಕೆ ನಿಂತ ಪ್ರಿಯಾಂಕಾ ಗಾಂಧಿ, ನಿಜವಾದ ಭಾರತೀಯ ಯಾರು ಎಂದು ಸುಪ್ರೀಂಕೋರ್ಟ್ ನ್ಯಾಯಾಧೀಶರು ನಿರ್ಧರಿಸಲು ಸಾಧ್ಯವಿಲ್ಲ, ಅವರ ವ್ಯಾಪ್ತಿಗೆ ಅದು ಬರುವುದಿಲ್ಲ ಎಂದು ಹೇಳಿದ್ದಾರೆ.
ದೆಹಲಿಯ ಸಂಸತ್ ಬಳಿ ಮಾತನಾಡಿದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ, "ಸುಪ್ರೀಂಕೋರ್ಟ್ನ ಗೌರವಾನ್ವಿತ ನ್ಯಾಯಾಧೀಶರು, ಯಾರು ನಿಜವಾದ ಭಾರತೀಯ ಎಂದು ನಿರ್ಧರಿಸಲಾಗಲ್ಲ. ನನ್ನ ಸಹೋದರನಿಗೆ ಸೇನೆಯ ಬಗ್ಗೆ ಅತ್ಯುನ್ನತ ಗೌರವವಿದೆ. ಮತ್ತು ಸೇನೆ ವಿರುದ್ಧ ಎಂದಿಗೂ ಏನನ್ನೂ ಹೇಳುವುದಿಲ್ಲ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿ, ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳುವುದು ರಾಹುಲ್ ಗಾಂಧಿಯವರ ಕರ್ತವ್ಯ. ಆದ್ದರಿಂದ ಇದು ನ್ಯಾಯಾಧೀಶರ ತಪ್ಪು ವ್ಯಾಖ್ಯಾನವಾಗಿದೆ" ಎಂದು ತಿಳಿಸಿದರು.
ಸುಪ್ರೀಂಕೋರ್ಟ್ ನ್ಯಾಯಾಧೀಶರು ಹೇಳಿದ್ದೇನು?
ಡಿಸೆಂಬರ್ 2022 ರ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಸೇನೆಯ ಬಗ್ಗೆ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲಕ್ನೋ ನ್ಯಾಯಾಲಯದಲ್ಲಿ ರಾಹುಲ್ ವಿರುದ್ಧದ ವಿಚಾರಣೆಗೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ. ಆದಾಗ್ಯೂ, ಕಾಂಗ್ರೆಸ್ ನಾಯಕನನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾ.ದೀಪಂಕರ್ ದತ್ತ ಟೀಕಿಸಿದ್ದರು.
ಭಾರತದ 2 ಕಿಮೀ ಭೂ ಪ್ರದೇಶವನ್ನು ಚೀನಾ ವಶಪಡಿಸಿಕೊಂಡಿದೆ ಎಂದು ಹೇಗೆ ಹೇಳುತ್ತಿರಿ?, ನಿಮಗೆ ಹೇಗೆ ತಿಳಿಯಿತು?, ನಿಜವಾದ ಭಾರತೀಯನಾಗಿದ್ದರೇ ಇಂತಹ ಮಾತನ್ನು ಹೇಳುತ್ತಿರಲಿಲ್ಲ ಎಂದು ರಾಹುಲ್ ಹೇಳಿಕೆಯನ್ನು ಖಂಡಿಸಿದ್ದರು. ಈ ವೇಳೆ ರಾಹುಲ್ ಪರ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ, ರಾಹುಲ್ ಗಾಂಧಿ ವಿಪಕ್ಷ ನಾಯಕರಾಗಿ ಇಂತಹ ವಿಷಯಗಳನ್ನು ಮಾತನಾಡಲಿಲ್ಲ ಅಂದ್ರೆ ವಿಪಕ್ಷ ನಾಯಕರಾಗಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ನ್ಯಾ.ದತ್ತ, ಈ ರೀತಿಯ ವಿಷಯಗಳನ್ನು ಸಂಸತ್ನಲ್ಲಿ ಮಾತನಾಡಬೇಕು. ಸೋಷಿಯಲ್ ಮೀಡಿಯಾದಲ್ಲಿ ಯಾಕೆ ಪೋಸ್ಟ್ ಹಾಕಬೇಕು ಎಂದು ಪ್ರಶ್ನಿಸಿದ್ದರು.
ಸುಪ್ರೀಂಕೋರ್ಟ್ ಟೀಕೆ ಬೆನ್ನಲ್ಲೇ ಆಡಳಿತರೂಢ ಬಿಜೆಪಿ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಚೀನಾವನ್ನು ಬಲಪಡಿಸಲು ಪ್ರತಿಜ್ಞೆ ಮಾಡಿದ್ದಾರೆಂದು ವಾಗ್ದಾಳಿ ನಡೆಸಿತ್ತು. ಗಲ್ವಾನ್ ಘಟನೆಯಲ್ಲಿ 20 ಸೈನಿಕರ ಬಲಿದಾನಕ್ಕೆ ಪ್ರತಿಯೊಬ್ಬ ಭಾರತೀಯ ದೇಶಭಕ್ತನು ಉತ್ತರ ಹುಡುಕುತಿದ್ದಾನೆ. ಆದರೆ, ಕೇಂದ್ರ ಸರ್ಕಾರ ಗಮನವನ್ನು ಬೇರೆಡೆ ಸೆಳೆಯುವ, ಸುಳ್ಳು ಹೇಳುತ್ತಾ, ಸತ್ಯವನ್ನು ಮರೆಮಾಚುತ್ತಿದೆ ಎಂದು ಕಾಂಗ್ರೆಸ್ ಕಿಡಿಕಾರಿತ್ತು. (ಏಜೆನ್ಸೀಸ್)