ನ್ಯೂಸ್

ಸಿಬಿಐ ತನಿಖೆಗೆ ಸುಪ್ರೀಂ ನಿಗಾ; ಯೋಗಿ ಸರ್ಕಾರದ ಮನವಿ

ಹಾಥರಸ್: ಉತ್ತರ ಪ್ರದೇಶದ ಹಾಥರಸ್​ನ ಸಾಮೂಹಿಕ ಅತ್ಯಾಚಾರ ಪ್ರಕರಣ ಕುರಿತಂತೆ ಸಿಬಿಐ ನಡೆಸುತ್ತಿರುವ ತನಿಖೆ ಮೇಲೆ ಮೇಲ್ವಿಚಾರಣೆ ಮಾಡುವಂತೆ ಸುಪ್ರೀಂಕೋರ್ಟ್​ಗೆ ಯೋಗಿ ಆದಿತ್ಯನಾಥ ಸರ್ಕಾರ ಮನವಿ ಮಾಡಿದೆ. ಜತೆಗೆ ಸಂತ್ರಸ್ತೆಯ ಕುಟುಂಬಸ್ಥರು ಹಾಗೂ ಪ್ರಕರಣದ ಸಾಕ್ಷಿಗಳಿಗೆ ಸಂಪೂರ್ಣ ಭದ್ರತೆ ಒದಗಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದೆ. ಸಂತ್ರಸ್ತೆ ಕುಟುಂಬಕ್ಕೆ 3 ಹಂತದ ಭದ್ರತೆ ನೀಡಲಾಗಿದೆ. ಮನೆಯ ಹೊರಗೆ 8 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಅವರಿಗೆ ಯಾವುದೇ ಅಪಾಯ ಇಲ್ಲ ಎಂದು ಅಫಿಡವಿಟ್​ನಲ್ಲಿ ತಿಳಿಸಿದೆ. ಸಂತ್ರಸ್ತೆಯ ಶವವನ್ನು ರಾತ್ರೊರಾತ್ರಿ ಅಂತ್ಯಸಂಸ್ಕಾರ ನಡೆಸಿದ್ದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಅಲಹಾಬಾದ್

ಹೈಕೋರ್ಟ್​ನ ಲಖನೌ ಪೀಠ ರಾಜ್ಯ ಪೊಲೀಸರನ್ನು ತರಾಟೆಗೆ ತೆಗೆದು ಕೊಂಡಿದೆ. ಜತೆಗೆ ಇಂತಹ ಪ್ರಕರಣಗಳಲ್ಲಿ ಅಂತ್ಯಕ್ರಿಯೆ ನಡೆಸಲು ಸೂಕ್ತ ವಿಧಾನಗಳನ್ನು ರಚಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಪ್ರಕರಣದ ಸೂಕ್ಷ್ಮತೆಯನ್ನು ಗಮನಿಸಿ ಈ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಹೇಳಿಕೆಗಳನ್ನು ನೀಡದಂತೆ ಅಧಿಕಾರಿಗಳು, ರಾಜಕೀಯ ಪಕ್ಷಗಳು ಮತ್ತು ಇತರ ನಾಯಕರಿಗೆ ಸೂಚಿಸಿದೆ.

ಪಿಎಫ್​ಐ ಸದಸ್ಯರ ವಿಚಾರಣೆ: ಹಾಥರಸ್ ಪ್ರಕರಣದ ನೆಪದಲ್ಲಿ ಜಾತಿ ಕಲಹವೆಬ್ಬಿಸಲು ವಿದೇಶದಿಂದ ಭಾರಿ ಹಣ ಹರಿದುಬಂದಿದೆ ಎಂಬ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಜಾರಿ ನಿರ್ದೇಶನಾಲಯ (ಇಡಿ), ಬಂಧಿತರಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್​ಐ) ನಾಲ್ವರು ಸದಸ್ಯರ ವಿಚಾರಣೆಗೆ ಅವಕಾಶ ನೀಡುವಂತೆ ಮಥುರಾದ ಕೋರ್ಟ್​ಗೆ ಅರ್ಜಿ ಸಲ್ಲಿಸಿದೆ.