ಶಿರಾ: ನಗರದಲ್ಲಿ ಅತ್ಯಾಧುನಿಕ ಕ್ರೀಡಾಂಗಣ ಹಾಗೂ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಶಾಸಕರು 4 ಎಕರೆ ಜಾಗ ಗುರುತಿಸಿದ್ದು, ಶೀಘ್ರ ಕಾರ್ಯ ರೂಪಿಸಲು ಆಯುಕ್ತರಿಗೆ ತಿಳಿಸಲಾಗುವುದು ಎಂದು ರೇಷ್ಮೆಮತ್ತು ಕ್ರೀಡಾ ಯುವ ಸಬಲೀಕರಣ ಸಚಿವ ಡಾ.ಕೆ.ಸಿ.ನಾರಾಯಣಗೌಡ ತಿಳಿಸಿದರು.
ನಗರದ ವಿವೇಕಾನಂದ ಕ್ರೀಡಾಂಗಣಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿದ ಅವರು, ದೇಶದ ಯುವಶಕ್ತಿಯನ್ನು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡುವುದು ಪ್ರಧಾನಿ ಮೋದಿ ಅವರ ಕನಸು. ಅದರಂತೆ ರಾಜ್ಯಾದ್ಯಂತ ಸಂಚರಿಸಿ ಕ್ರೀಡಾ ಚಟುವಟಿಕೆಗಳಿಗೆ ಆದ್ಯತೆ ನೀಡುತ್ತೇನೆ. ವಿವೇಕಾನಂದ ಕ್ರೀಡಾಂಗಣದಲ್ಲಿ 400 ಮೀಟರ್ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಗೊಳ್ಳಲಿದೆ. ದೇಹದಾರ್ಢ್ಯ ಸ್ಪರ್ಧೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ನೀಡುತ್ತಿರುವ ಶಿರಾದ ಪೂಜಿತಾಗೆ ಇಲಾಖೆಯಿಂದ ಹಣ ಸಹಾಯ ಮಾಡುವ ಭರವಸೆ ನೀಡಿದರು.
ರೇಷ್ಮೆ ಬೆಳೆಯಲ್ಲಿ ಶಿರಾ ಮುಂಚೂಣಿಯಲ್ಲಿದ್ದು, ರೇಷ್ಮೆ ನಿಗಮ ಮಂಡಳಿ ಅಧ್ಯಕ್ಷ ಎಸ್‌ಆರ್ ಗೌಡ ಅವರೊಂದಿಗೆ ಚರ್ಚಿಸಿ ಶಿರಾ ತಾಲೂಕಿನಲ್ಲಿ ರೇಷ್ಮೆ ಸಾಕಾಣಿಕೆಗೆ ಬೇಕಾಗುವ ಶೆಡ್‌ಗಳಿಗೆ ಸಬ್ಸಿಡಿ ಹಣ ಬಿಡುಗಡೆ ಮಾಡಲಾಗುವುದು. ರೇಷ್ಮೆ ಮಾರಾಟಕ್ಕೆ ರೈತರಿಗೆ ಅನುಕೂಲವಾಗುವ ರೀತಿ ಉಪಕೇಂದ್ರಗಳನ್ನು ತೆರೆಯಲಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆ.ಎಸ್.ಐ. ಸಿ.ಮೈಸೂರ್ ಸಿಲ್ಕ್ ಸೀರೆಗಳು ಮಾರಾಟ ಮಾಡಲು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಳಿಗೆ ತೆರೆಯಲಾಗುವುದು ಎಂದು ತಿಳಿಸಿದರು.
ರೇಷ್ಮೆಗೂಡು ಮಾರಾಟಕ್ಕೆ ಹೋದಾಗ 2 ಕೆಜಿ ಗೂಡನ್ನು ಮಾರಾಟಗಾರರು ಪಡೆಯುತ್ತಾರೆ ಎಂದು ರೈತನೊಬ್ಬ ಸಚಿವರ ಗಮನ ಸೆಳೆದಾಗ, ಒಂದೇ ಒಂದು ರೇಷ್ಮೆಗೂಡು ನೀಡಬೇಡಿ. ನಿಮಗೆ ತೊಂದರೆಯಾದರೆ ನನಗೆ ಫೋನ್ ಮಾಡಿ ಸಮಸ್ಯೆ ತಿಳಿಸಿ ಎಂದರು.