ಕೋಲಾರ: ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸುವ ಉದ್ದೇಶವಿದ್ದಲ್ಲಿ ಜೆಡಿಎಸ್‌ನವರು ಬಿಜೆಪಿ ಬೆಂಬಲಿಸಲಿ ಎಂದು ಆರೋಗ್ಯ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.
ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಮಪತ್ರ ಸಲ್ಲಿಕೆಯ ದಿನವೇ ನಾನು ಬಿಜೆಪಿಗೆ ಬೆಂಬಲ ನೀಡುವಂತೆ ಜೆಡಿಎಸ್‌ಗೆ ಕೋರಿದ್ದೆ. ಈಗ ಮತ್ತೊಮ್ಮೆ ಬೆಂಬಲ ಕೇಳುತ್ತಿರುವೆ ಎಂದರು.
ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೀಡಿರುವ ಜನಪರ ಯೋಜನೆಗಳಿಂದ ಬಿಜೆಪಿ, ರಾಜ್ಯದಲ್ಲಿ ಸದೃಢವಾಗಿ ಬೆಳೆದಿರುವುದರಿಂದ ಜೆಡಿಎಸ್ ಜತೆ ಹೊಂದಾಣಿಕೆ ಪ್ರಶ್ನೆ ಉದ್ಭವಿಸುವುದಿಲ್ಲ. ಆದರೆ ಅನಿವಾರ್ಯ ಸಂದರ್ಭದಲ್ಲಿ ಪರಸ್ಪರ ಬೆಂಬಲ ಪಡೆಯಲು, ನೀಡಲು ಅವಕಾಶಗಳಿದ್ದು, ಪರಿಷತ್ ಚುನಾವಣೆಯಲ್ಲಿ ನಾವು ಮುಂಚೂಣಿಯಲ್ಲಿರುವುದರಿಂದ ಗೆಲುವು ಇನ್ನಷ್ಟು ಸುಲಭವಾಗಲಿ ಎಂಬ ಕಾರಣಕ್ಕೆ ಬೆಂಬಲ ಕೋರಿದ್ದೇವೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಎಲ್ಲ ಸರ್ಕಾರಗಳ ಕಾಲದಲ್ಲೂ ಚುನಾವಣೆಗಳು ಹೇಗೆ ನಡೆದಿವೆ ಎಂಬುದು ಎಲ್ಲರಿಗೂ ಗೊತ್ತಿದೆ. ನಾವು ಚುನಾವಣೆಯನ್ನು ಉತ್ತಮವಾಗಿ ನಡೆಸುತ್ತಿದ್ದೇವೆ, ಆಡಳಿತ ಯಂತ್ರ ದುರುಪಯೋಗ, ಹಣ ಹಂಚಿಕೆ ಬಗ್ಗೆ ವಿರೋಧಿಗಳು ಮಾಡಿರುವ ಆರೋಪ ಆಧಾರರಹಿತ ಎಂದು ತಳ್ಳಿ ಹಾಕಿದರು.
ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಮಾತನಾಡಿ, ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸಲು, ಸ್ಥಳೀಯ ಕಾರ್ಖಾನೆಗಳಲ್ಲಿ ಯುವಕರಿಗೆ ಉದ್ಯೋಗ, ಮಹಿಳೆಯರ ಸಬಲೀಕರಣಕ್ಕೆ ಸರ್ಕಾರ ಯೋಜನೆ ರೂಪಿಸಿದ್ದು, ಚುನಾವಣೆ ಬಳಿಕ ಅನುಷ್ಠಾನಕ್ಕೆ ತರಲಾಗುವುದು. ಚುನಾವಣೆ ಹಿನ್ನೆಲೆಯಲ್ಲಿ ಸಭೆಗಳನ್ನು ನಡೆಸಿಲ್ಲ, ಅಭಿವೃದ್ಧಿ ಕೆಲಸದಲ್ಲಿ ಮುಂದೆ ನನ್ನ ಹೆಜ್ಜೆ ಗುರುತು ಕಾಣುವಿರಿ ಎಂದು ಸ್ಪಷ್ಟಪಡಿಸಿದರು.
ಶಾಸಕ ಎಚ್.ನಾಗೇಶ್, ಎಂಎಲ್‌ಸಿ ವೈ.ಎ.ನಾರಾಯಣಸ್ವಾಮಿ, ಮಾಜಿ ಶಾಸಕರಾದ ವರ್ತೂರು ಆರ್.ಪ್ರಕಾಶ್, ಕೆ.ಎಸ್.ಮಂಜುನಾಥಗೌಡ, ಬಿ.ಪಿ.ವೆಂಕಟಮುನಿಯಪ್ಪ, ವೈ.ಸಂಪಂಗಿ, ಅಭ್ಯರ್ಥಿ ಡಾ.ಕೆ.ಎನ್.ವೇಣುಗೋಪಾಲ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಜಿಲ್ಲಾ ಮಾಧ್ಯಮ ವಕ್ತಾರ ಎಸ್.ಬಿ.ಮುನಿವೆಂಕಟಪ್ಪ, ಮಾದ್ಯಮ ಸಂಚಾಲ ನಾರಾಯಣಸ್ವಾಮಿ ಉಪಸ್ಥಿತರಿದ್ದರು.
5 ಟಿಎಂಸಿ ನೀರು ವಿನಿಮಯ: ಇತ್ತೀಚೆಗೆ ತಿರುಪತಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಗೋದಾವರಿ, ಕೃಷ್ಣಾದಿಂದ 5 ಟಿಎಂಸಿ ನೀರನ್ನು ವಿನಿಮಯವಾಗಿ ಪಡೆದು ಪೈಪ್‌ಲೈನ್ ಮೂಲಕ ಕೋಲಾರ, ಚಿಕ್ಕಬಳ್ಳಾಪುರಕ್ಕೆ ಹರಿಸುವ ಬಗ್ಗೆ ಆಂಧ್ರದ ಸಿಎಂ ಜಗನ್‌ಮೋಹನ್‌ರೆಡ್ಡಿ ಜತೆ ಚರ್ಚಿಸಿದ್ದು, ತಿಂಗಳೊಳಗೆ ಎರಡೂ ರಾಜ್ಯಗಳ ಸಿಎಂಗಳ ಅಧಿಕೃತ ಸಭೆ ನಡೆಯಲಿದೆ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಹೊಸ ಯೋಜನೆ ಘೋಷಣೆ ಮಾಡಲು ಸಾಧ್ಯವಿಲ್ಲ ಎಂದು ಸುಧಾಕರ್ ಹೇಳಿದರು.
ಸ್ವಾಮಿ ವಿರುದ್ಧ ಟೀಕೆ: ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರ ನಡೆ ಮತ್ತು ನುಡಿಯಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಅವರು ಕಾಂಗ್ರೆಸ್‌ನಲ್ಲಿನ ಖಾವಿ ಇಲ್ಲದ ಸ್ವಾಮಿ. ಪುಕ್ಕಟೆ ಬುದ್ಧಿವಾದ, ಬೋಧನೆ ಮಾಡುತ್ತಾರೆ. ಪಾರ್ಲಿಮೆಂಟ್ ಎಲೆಕ್ಷನ್‌ನಲ್ಲಿ ಬಿಜೆಪಿ, ಎಂಎಲ್‌ಸಿ ಎಲೆಕ್ಷನ್‌ನಲ್ಲಿ ಜೆಡಿಎಸ್ ಪರ ಎನ್ನುವವರಿಂದ ನಾನು ಪಾಠ ಕಲಿಯಬೇಕಾಗಿಲ್ಲ ಎಂದು ಸುಧಾಕರ್ ಟೀಕಿಸಿದರು.
ನನ್ನ ಮೇಲೆ ಭ್ರಷ್ಟಾಚಾರ ಉಲ್ಲೇಖವಿಲ್ಲ: ನಾನು ಆರೋಗ್ಯ ಸಚಿವನಾದ ಮೇಲೆ ಕರೊನಾ ನಿರ್ವಹಣೆ ಹಾಗೂ ಇಲಾಖೆಯನ್ನು ಸದೃಢಗೊಳಿಸಲು ಖರ್ಚಾಗಿರುವ ಹಣದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ನೀಡಿರುವ ವರದಿಯಲ್ಲಿ ಸಿಎಜೆ ನನ್ನ ಬಗ್ಗೆ ಯಾವುದೇ ಆರೋಪ ಉಲ್ಲೇಖಿಸಿಲ್ಲ. ರಮೇಶ್‌ಕುಮಾರ್ ಆರೋಗ್ಯ ಸಚಿವರಾಗಿದ್ದಾಗ 500 ಕೋಟಿ ರೂ. ಭ್ರಷ್ಟಾಚಾರ ನಡೆದಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿತ್ತು, ಆ ಬಗ್ಗೆ ಉತ್ತರಿಸಲಿ ಎಂದು ಆರೋಗ್ಯ ಸಚಿವರು ಸವಾಲ್ ಹಾಕಿದರು.
ಜಿಲ್ಲೆಗೆ ಅಧಿಕೃತ ಉಸ್ತುವಾರಿ ಸಚಿವರನ್ನು ಇನ್ನೂ ನೇಮಕ ಮಾಡದಿದ್ದರೂ ಸಚಿವ ಮುನಿರತ್ನ ಜಿಲ್ಲೆಯ ಮೇಲಿನ ಪ್ರೀತಿಯಿಂದ ಹೆಚ್ಚಿನ ಅನುದಾನ ಕೊಡಿಸಿ ಅಭಿವೃದ್ಧಿ ಕೆಲಸಕ್ಕೆ ಸಹಕರಿಸಿದ್ದಾರೆ. ಎಸ್.ಮುನಿಸ್ವಾಮಿ, ಸಂಸದ