ನ್ಯೂಸ್

ಬೆಂಬಲ ಬೆಲೆಯಡಿ ರಾಗಿ, ಸಾಮೆ ಖರೀದಿ: ಶಾಸಕ ಗೋವಿಂದಪ್ಪ ಹೇಳಿಕೆ

ಹರ್ಷ ನ.ಪುರೋಹಿತ

ಹೊಸದುರ್ಗ: ಬೆಂಬಲಬೆಲೆಯಡಿ ರಾಗಿ, ಸಾಮೆ ಖರೀದಿಗೆ ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಬಿ.ಜಿ. ಗೋವಿಂದಪ್ಪ ತಿಳಿಸಿದರು.

ತಾಲೂಕಿನ ಕೆಲ್ಲೋಡು ಕಾಗಿನೆಲೆ ಕನಕ ಗುರುಪೀಠದಲ್ಲಿ ಶನಿವಾರ ಕನಕ ಜಯಂತಿ ಪ್ರಯುಕ್ತ ಕೃಷಿ ಇಲಾಖೆ ಆಯೋಜಿಸಿದ್ದ ಸಿರಿಧಾನ್ಯ ಸಿರಿ ವಿಚಾರ ಸಂಕಿರಣ ಹಾಗೂ ಸಿರಿಧಾನ್ಯಗಳ ಸಂಸ್ಕರಣೆ, ಮೌಲ್ಯವರ್ಧನೆ, ಉತ್ಪಾದಕರು ಹಾಗೂ ಮಾರುಕಟ್ಟೆ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ಸಿರಿಧಾನ್ಯಗಳ ಉಪಯೋಗ, ಬೆಳೆ ಹಾಗೂ ಆಹಾರ ಪದ್ಧತಿ ತಿಳಿಸುವುದು ವಿಚಾರ ಸಂಕಿರಣದ ಉದ್ದೇಶವಾಗಿದೆ. ಕೃಷಿ ಸಚಿವರಾಗಿದ್ದ ವೇಳೆ ತಾಲೂಕಿಗೆ ಭೇಟಿ ನೀಡಿದ್ದ ಕೃಷ್ಣ ಬೈರೇಗೌಡ ಸಿರಿಧಾನ್ಯಗಳ ಕುರಿತು ತಿಳಿದುಕೊಂಡು ಅವುಗಳ ಮಹತ್ವವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚುರಪಡಿಸಿದರು ಎಂದರು.

ತಾಲೂಕಿನಲ್ಲಿ 60 ಸಾವಿರ ಎಕರೆ ಪ್ರದೇಶದಲ್ಲಿ ರಾಗಿ, 40 ಸಾವಿರ ಎಕರೆಯಲ್ಲಿ ಸಾಮೆ ಬೆಳೆಯಲಾಗುತ್ತಿದೆ. ಸಿರಿಧಾನ್ಯಗಳಿಗೆ ಹೆಚ್ಚಿನ ರಸಗೊಬ್ಬರ ಅಗತ್ಯ ಇಲ್ಲದಿರುವುದರಿಂದ ಭೂಮಿ ಆರೋಗ್ಯ ಕಾಪಾಡಬಹುದು. ಸಾವಯವ ಕೃಷಿಗೆ ಇದು ಯೋಗ್ಯ ಬೆಳೆಯಾಗಿದೆ. ಸಿರಿಧಾನ್ಯಗಳಿಗೆ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಸರ್ಕಾರದ ಮೇಲೆ ಒತ್ತಡ ಹೇರಿ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಸಾವೆ ಪ್ರತಿ ಕ್ವಿಂಟಾಲ್ ಐದು ಸಾವಿರ ರೂ. ಬೆಂಬಲ ಬೆಲೆ ಇದೆ ಎಂದರು.

ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಕೃಷಿ ಮೇಳ ಆಯೋಜಿಸುವ ಮೂಲಕ ಕನಕ ಗುರುಪೀಠದಲ್ಲಿ ಕನಕ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ರೈತರಿಗೆ ಅನುಕೂಲವಾಗಲಿದೆ ಎಂದರು.

ಕನಕದಾಸರು 600 ವರ್ಷಗಳ ಹಿಂದೆಯೇ ರಾಮಧಾನ್ಯ ಚರಿತೆ ಮೂಲಕ ರಾಗಿಯ ಮಹತ್ವವನ್ನು ತಿಳಿಸಿ ಸಿರಿಧಾನ್ಯಗಳನ್ನು ಪ್ರಚಾರ ಮಾಡಿದ್ದರು. ರೈತ ಮಹಿಳೆಯರು ತಯಾರಿಸಿದ ಸಿರಿಧಾನ್ಯ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ದೊರೆತರೆ ಆರ್ಥಿಕ ಸಬಲೀಕರಣ ಸಾಧಿಸಬಹುದು. ಶಾಸಕ ಗೋವಿಂದಪ್ಪ ಅವರ ಪ್ರಯತ್ನದ ಫಲವಾಗಿ ಸಿರಿಧಾನ್ಯಗಳಿಗೆ ಮಹತ್ವ ಬಂದಿದೆ ಎಂದರು.

ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಮಾತನಾಡಿ, ಸಂತ ಕನಕದಾಸರ 538 ನೇ ಜಯಂತಿಯಂದು ಕೃಷಿ ವಿಚಾರ ಸಂಕಿರಣ ಹಾಗೂ ಪ್ರದರ್ಶನ ಆಯೋಜಿಸಿ ಅವರನ್ನು ಸ್ಮರಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಕೃಷಿ ಇಲಾಖೆ ಸಿರಿಧಾನ್ಯಗಳ ಮಹತ್ವ ಹಾಗೂ ಬಳಕೆ ಕುರಿತು ಹೆಚ್ಚಿನ ಪ್ರಚಾರಕ್ಕೆ ಮುಂದಾಗಿದೆ. ಬೆಳೆಗಾರರಿಗೂ ಸರ್ಕಾರ ಉತ್ತಮ ಸಹಕಾರ ನೀಡುತ್ತಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಕರಿಯಮ್ಮ, ಬಸವ ತತ್ವ ಗುರು ಪೀಠದ ಶ್ರೀ ಮರಳುಸಿದ್ದ ಸ್ವಾಮೀಜಿ, ಶಿಕಾರಿಪುರದ ಶ್ರೀ ಚನ್ನಬಸವ ಸ್ವಾಮೀಜಿ, ಯುವ ಮುಖಂಡ ಅರುಣ್ ಗೋವಿಂದಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಕಾರೇಹಳ್ಳಿ ಬಸವರಾಜ, ಕೃಷಿಕ ಸಮಾಜದ ಅಧ್ಯಕ್ಷ ರಾಗಿ ಶಿವಮೂರ್ತಿ, ಕೃಷಿ ಉಪ ನಿರ್ದೇಶಕ ಶಿವಕುಮಾರ್, ಕೃಷಿ ಎಡಿ ಸಿ.ಎಸ್. ಈಶ , ಆಗ್ರೋ ಶಿವಣ್ಣ, ನರೇಶ್ ಜೆಂಕಾರ್ ಇತರರಿದ್ದರು.

ಕೃಷಿ ಉತ್ಪನ್ನಗಳ ಪ್ರದರ್ಶನ

ಕನಕ ಗುರು ಪೀಠದ ಆವರಣದಲ್ಲಿ ಕೃಷಿ ಮೇಳದ ಅಂಗವಾಗಿ ರೈತರಿಗೆ ಉಪಯುಕ್ತ ಕೃಷಿ ಪರಿಕರಗಳು, ಬೀಜ, ಗೊಬ್ಬರ, ಅತ್ಯಾಧುನಿಕ ಕೃಷಿ ಸಲಕರಣೆಗಳು ಹಾಗೂ ಕೃಷಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿತ್ತು.

ಶಾಸಕ ಬಿ.ಜಿ. ಗೋವಿಂದಪ್ಪ ಕೃಷಿ ಮೇಳಕ್ಕೆ ಚಾಲನೆ ನೀಡಿ ಗಣ್ಯರೊಂದಿಗೆ ಪ್ರದರ್ಶನ ವೀಕ್ಷಿಸಿದರು. ಕಾರ್ಯಕ್ರಮಕ್ಕೆ ಮುನ್ನ ರೈತರು ಹಾಗೂ ರೈತ ಮಹಿಳೆಯರು ಜಾಥಾ ನಡೆಸಿ ಗಮನ ಸೆಳೆದರು. ವೇದಿಕೆಯ ಮುಂಭಾಗದಲ್ಲಿ ಸಿರಿ ಧಾನ್ಯಗಳನ್ನು ಬಳಸಿ ಹಾಕಲಾಗಿದ್ದ ಬೃಹತ್ ರಂಗೋಲಿ ಜನರ ಗಮನ ಸೆಳೆಯಿತು.

ವಿಚಾರ ಸಂಕಿರಣ

ಸಿರಿಧಾನ್ಯಗಳ ಸಿರಿ ವಿಚಾರ ಸಂಕಿರಣದಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಸಾವಯವ ಕೃಷಿ ಸಂಶೋಧನಾ ಸಂಸ್ಥೆ ಮುಖ್ಯಸ್ಥ ಡಾ. ಬಸವಣ್ಣಪ್ಪ ಸಾವಯವ ಕೃಷಿಯ ಮಹತ್ವ ಕುರಿತು, ಬೆಂಗಳೂರು ಕೃಷಿ ವಿವಿಯ ಡಾ. ಸಂಜಯ್ ಸಮಗ್ರ ಕೃಷಿ ಪದ್ಧತಿ ಕುರಿತು, ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ತಿಪ್ಪೆಸ್ವಾಮಿ ಕುರಿ ಸಾಕಣೆ ಕುರಿತು, ಬಬ್ಬೂರು ಕೃಷಿ ಸಂಶೋಧನಾ ಸಂಸ್ಥೆಯ ಕೃಷಿ ವಿಜ್ಞಾನಿ ಡಾ.ನಂದಿನಿ ಅವರು ಸಿರಿಧಾನ್ಯಗಳಲ್ಲಿ ನೂತನ ತಾಂತ್ರಿಕತೆಗಳ ಕುರಿತು ಮಾತನಾಡಿದರು.