ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಎಚ್.ಎಸ್.ಮಹೇಶ್ ಹುಲ್ಕುಳಿ  
ನ್ಯೂಸ್

ಗೊಂದಲಗಳಿಗೆ ಕಿವಿಗೊಡದೆ ಷೇರುದಾರರ ಬೆಂಬಲ

ನವೀನ ಬಿ.ಎಂ

ಶಿವಮೊಗ್ಗ: ಹಣ, ಜಾತಿ ಮತ್ತು ಅಧಿಕಾರದ ಕುತಂತ್ರದಿಂದ ಷೇರುದಾರರಲ್ಲಿ ಗೊಂದಲ ಸೃಷ್ಟಿಸುವ ಹುನ್ನಾರ ಮ್ಯಾಮ್ಕೋಸ್ ಚುನಾವಣೆಯಲ್ಲಿ ನಡೆಯಿತು. ಆದರೂ ಷೇರುದಾರರು ಅದ್ಯಾವುದಕ್ಕೂ ಕಿವಿಗೊಡದೆ ಸಹಕಾರ ಭಾರತಿಗೆ ಬೆಂಬಲ ನೀಡಿದ್ದಾರೆ ಎಂದು ಸಹಕಾರ ಭಾರತಿ ಜಿಲ್ಲಾಧ್ಯಕ್ಷ, ಮ್ಯಾಮ್ಕೋಸ್ ಉಪಾಧ್ಯಕ್ಷ ಎಚ್.ಎಸ್.ಮಹೇಶ್ ಹುಲ್ಕುಳಿ ಹೇಳಿದರು.

ನಿರೀಕ್ಷೆಯಂತೆ ಎಲ್ಲ 19 ಅಭ್ಯರ್ಥಿಗಳು ಜಯ ಸಾಧಿಸಿದ್ದೇವೆ. ಎಲ್ಲರಿಗಾಗಿ ನಾನು, ನನಗಾಗಿ ಎಲ್ಲರೂ ತತ್ವದಡಿ ಸಹಕಾರ ಭಾರತಿ ಕೆಲಸ ಮಾಡುತ್ತಿದ್ದು, ಪುನಃ ಮ್ಯಾಮ್ಕೋಸ್ ಆಡಳಿತದ ಚುಕ್ಕಾಣಿ ಹಿಡಿದಿದ್ದೇವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಮ್ಮ ಸಾಧನೆ ಸಹಿಸಲಾಗದೆ, ಅಭಿವೃದ್ಧಿಗೆ ಹಿನ್ನಡೆ ಮಾಡಲು ಕೆಲವರು ಮುಂದಾದರು. ಚುನಾವಣಾ ಪೂರ್ವ ಕೊಟ್ಟ ಎಲ್ಲ ಭರವಸೆ ಈಡೇರಿಸುತ್ತ, ಸಂಘದ ಷೇರುದಾರರಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ. ವಿಶೇಷವಾಗಿ ಶಿವಮೊಗ್ಗ ಮತ್ತು ತೀರ್ಥಹಳ್ಳಿ ಷೇರುದಾರರ ದಿಕ್ಕು ತಪ್ಪಿಸುವ ಕೆಲಸ ಆಯಿತು. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಎದುರಾಳಿ ತಂಡದವರು ಕುತಂತ್ರ ನಡೆಸಿದರು. ಅದನ್ನು ಸಹಕಾರ ಭಾರತಿ ಖಂಡಿಸಿದ್ದು ಪೊಲೀಸ್ ಇಲಾಖೆ ಮತ್ತು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೇವೆ ಎಂದರು.

ಸಹಕಾರ ಪ್ರತಿಷ್ಠಾನವು ಕಳೆದೆರಡು ವರ್ಷಗಳಿಂದ ಸಂಘದ ಪ್ರತಿ ಕೆಲಸಕ್ಕೂ ಹಿನ್ನಡೆ ಉಂಟುಮಾಡಲು ಯತ್ನಿಸಿತು. ಮಹಾಸಭೆ, ಷೇರುದಾರರ ಸಭೆಯಲ್ಲಿ ಗೊಂದಲ ಸೃಷ್ಟಿಸಿದರು. ಕರಪತ್ರದ ಮೂಲಕ ಷೇರುದಾರರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದರು ಎಂದು ದೂರಿದರು.

ತೀರ್ಥಹಳ್ಳಿ ಭಾಗದಲ್ಲಿ ಮ್ಯಾಮ್ಕೋಸ್‌ನಿಂದ ರೈತರು ಅಡಕೆ ತೆಗೆದುಕೊಂಡು ಹೋಗುತ್ತಿದ್ದಾರೆಂಬ ಸುಳ್ಳು ಸುದ್ದಿಯನ್ನು ಹರಡಿಸಲಾಗಿತ್ತು. ಎಲ್ಲ ಪ್ರಯತ್ನಗಳನ್ನೂ ನಮ್ಮ ವಿರೋಧಿಗಳು ಮಾಡಿದ್ದಾರೆ. ಆದರೆ ಗೆಲ್ಲುವುದಕ್ಕೆ ಆಗಲಿಲ್ಲ. ಆಮಿಷಕ್ಕೆ ಷೇರುದಾರರು ಒಳಗಾಗಿಲ್ಲ. 2005ರಲ್ಲಿ ಮೊದಲ ಬಾರಿಗೆ ಸಹಕಾರ ಭಾರತಿ 15 ಸ್ಥಾನ ಗೆದ್ದು ಅಧಿಕಾರಕ್ಕೆ ಬಂದಿತ್ತು. ಆನಂತರ 2010ರಿಂದ ಇಲ್ಲಿವರೆಗೆ 19ಕ್ಕೆ 19 ಸ್ಥಾನ ಗೆದ್ದುಕೊಂಡು ಬಂದಿದ್ದೇವೆ ಎಂದರು.

ಶಾಸಕ ಎಸ್.ಎನ್.ಚನ್ನಬಸಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಪ್ರಮುಖರಾದ ವೈ.ಎಸ್.ಸುಬ್ರಹ್ಮಣ್ಯ, ಕೀರ್ತಿರಾಜ್, ವಿನ್ಸೆಂಟ್ ರೋಡ್ರಿಗಸ್, ಕೆ.ವಿ.ಕೃಷ್ಣಮೂರ್ತಿ, ಜಿ.ವಿರೂಪಾಕ್ಷ, ಕಚ್ಚೋಡಿ ಶ್ರೀನಿವಾಸ್, ಹಸಿರುಮನೆ ನಂದನ್ ಸುದ್ದಿಗೋಷ್ಠಿಯಲ್ಲಿದ್ದರು.